ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
‘ಕನಸು ಕಾಣುವ ಧೈರ್ಯ ಮಾಡಿ ಅದನ್ನು ನನಸಾಗಿಸುವ ಛಲವಿರಲಿ.’ ಎಂಬುದು ಧೀರೂಭಾಯಿ ಅಂಬಾನಿಯವರ ಮಂತ್ರವಾಗಿತ್ತು. ಅವರು ಗುಜರಾತಿನ ಒಂದು ಸಣ್ಣ ಹಳ್ಳಿಯಲ್ಲಿ ಶಿಕ್ಷಕರ ಮಗನಾಗಿ ಜನಿಸಿದರು. ಅವರ ಆರಂಭಿಕ ಜೀವನ ಬಹಳ ಸಂಕಷ್ಟದಿಂದ ಕೂಡಿತ್ತು. ಅವರು ತಮ್ಮ ವೃತ್ತಿಜೀವನವನ್ನು ಯಾತ್ರಿಕರಿಗೆ ಪಕೋಡಾ ಮಾರುವುದರ ಮೂಲಕ ಆರಂಭಿಸಿದರು. ನಂತರ ಯೆಮೆನ್ ದೇಶಕ್ಕೆ ತೆರಳಿ ಕೇವಲ ೩೦೦ ರೂಪಾಯಿ ಸಂಬಳಕ್ಕೆ ಪೆಟ್ರೊಲ್ ಬಂಕಿನಲ್ಲಿ ಕೆಲಸ ಮಾಡಿದರು. ನಂತರ ಭಾರತಕ್ಕೆ ಮರಳಿ ಕೇವಲ ೫೦,೦೦೦ ರೂಪಾಯಿ ಬಂಡವಾಳದೊಂದಿಗೆ ಸಣ್ಣ ವ್ಯಾಪಾರ ಆರಂಭಿಸಿದರು. ಮುಂದೆ ಅವರಿಂದ ಸ್ಥಾಪಿತವಾದ ರಿಲಯನ್ಸ್ ಇಂಡಸ್ಟ್ರೀಸ್ ಇಂದು ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಧೀರೂಭಾಯಿ ಅಂಬಾನಿಯವರು ಗೆಲುವಿನ ದೊಡ್ಡ ಸಾಮ್ರಾಜ್ಯ ಕಟ್ಟಿದ್ದು ಸಣ್ಣ ಆರಂಭದಿಂದಲೇ! ಸಣ್ಣ ಆರಂಭದಿಂದ ದೊಡ್ಡ ಮಟ್ಟದ ಯಶಸ್ಸು ಕಂಡವರ ಕಥೆಗಳು ನಮಗೆ ಸದಾ ಸ್ಪೂರ್ತಿ ನೀಡುತ್ತವೆ. ನಾವೂ ಅವರ ಸಾಲಿನಲ್ಲಿ ಒಬ್ಬರಾಗಬೇಕೆಂದರೆ ಏನನ್ನು ಮಾಡಬೇಕು ಏನನ್ನು ತಿಳಿದುಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಪುಟ್ಟ ಪ್ರಯತ್ನ
‘ಸಾವಿರ ಮೈಲಿಗಳ ಸುದೀರ್ಘ ಪಯಣವೂ ಒಂದು ಪುಟ್ಟ ಹೆಜ್ಜೆಯೊಂದಿಗೆ ಆರಂಭವಾಗುತ್ತದೆ.’ ಎಂಬುದು ಲಾವೊತ್ಸು ಹೇಳಿದ ಜನಪ್ರಿಯ ಮಾತು. ಇದು ಸಣ್ಣ ಆರಂಭವು ದೊಡ್ಡ ಗೆಲುವಿಗೆ ನಾಂದಿ ಹಾಡುವ ಮಹತ್ವವನ್ನು ತಿಳಿಸುತ್ತದೆ. ಪ್ರತಿಯೊಂದು ದೊಡ್ಡ ಸಾಧನೆಯ ಹಿಂದೆ ಒಂದು ಪುಟ್ಟ ಪ್ರಯತ್ನ ಇರುತ್ತದೆ. ಯಾವುದೇ ಸಾಧಕರ ಜೀವನ ಚರಿತ್ರೆಯ ಮೇಲೆ ಕಣ್ಣು ಹಾಯಿಸಿದರೂ ಒಂದು ಸತ್ಯ ಸ್ಪಷ್ಟವಾಗುತ್ತದೆ: ಅವರೆಲ್ಲ ದೊಡ್ಡ ಗುರಿಗಳನ್ನು ತಲುಪಲು ಮೊದಲಿಗೆ ಶುರು ಮಾಡಿದ್ದು ಸಣ್ಣ ಮಟ್ಟದಲ್ಲಿ. ಇದರರ್ಥ ಯಾವುದೇ ದೊಡ್ಡದು ಆರಂಭವಾಗುವುದು ಸಣ್ಣದರಿಂದಲೇ. ದೊಡ್ಡದೆಂದರೆ ಏನಲ್ಲ ಸಣ್ಣ ಸಣ್ಣವುಗಳ ರಾಶಿ ಅಷ್ಟೇ!
ಕಿರುಹೆಜ್ಜೆ
ಆರಂಭದ ಹೆಜ್ಜೆ ಕಿರು ಹೆಜ್ಜೆಯಾಗಿ ಕಂಡರೂ ನಿರಂತರವಾದ ಅದೇ ಹೆಜ್ಜೆ ಬೃಹದಾಕಾರವಾಗಿ ಬೆಳೆದು ನಿಲ್ಲುವಂತೆ ಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಪುಟ್ಟ ಪುಟ್ಟ ಹೆಜ್ಜೆಗಳಲ್ಲಿನ ಪ್ರಾಮಾಣಿಕತೆ ಮತ್ತು ಅವಿರತ ಪರಿಶ್ರಮ ಮುಖ್ಯವಾಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ’ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ.’ (ಲೋ ಏಮ್ ಇಸ್ ಅ ಕ್ರೆöÊಮ್) ಎಂದಿದ್ದಾರೆ ‘ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಎಂದು ಹೆಸರಾದ ಎಪಿಜೆ ಅಬ್ದುಲ್ ಕಲಾಂ. ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಮನಸ್ಸಿನದು ತಪ್ಪಿಲ್ಲ. ಆದರೆ ಆ ಕನಸಿನತ್ತ ಸಾಗಲು ಇಡುವ ಆರಂಭದ ಗಟ್ಟಿಯಾದ ಪುಟ್ಟ ಹೆಜ್ಜೆ ದೊಡ್ಡ ಸಾಧನೆಗೆ ಮುನ್ನುಡಿಯನ್ನು ಬರೆಯುತ್ತದೆ. ಪುಟ್ಟದಾದ ಹೆಜ್ಜೆಗಳು ನಮ್ಮ ಆತ್ಮವಿಶ್ವಾಸವನ್ನು ದೊಡ್ಡದಾಗಿ ಹೆಚ್ಚಿಸುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ.
ಅಡೆತಡೆ
ಇಂಗ್ಲೀಷ್‌ನಲ್ಲಿ ‘ವೆಲ್ ಬಿಗನ್ ಇಸ್ ಹಾಫ್ ಡನ್.’ (ಸರಿಯಾಗಿ ಆರಂಭಿಸಿದರೆ ಅರ್ಧ ಗೆಲುವು ಸಿಕ್ಕಂತೆ ಉಳಿದರ್ಧ ಗೆಲುವು ಆ ಗುರಿಯತ್ತ ಸಾಗುವ ನಿರಂತರ ಪ್ರಯತ್ನದಲ್ಲಿದೆ) ಎಂಬ ಮಾತಿದೆ. ಯಾವುದೇ ಗುರಿಯಲ್ಲಾಗಲಿ ಆರಂಭದ ಹಂತ ಬಹಳ ಮುಖ್ಯವಾಗಿರುತ್ತದೆ. ಹಾಗಂತ ಆರಂಭದಲ್ಲಿ ಒಮ್ಮೆಲೇ ಗೆಲುವಿನ ದಾರಿ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಯಾವುದೇ ಅಡೆತಡೆಯಿಲ್ಲದೇ ಸಾಗುವುದೂ ಇಲ್ಲ. ಕಾರ್ಯಾರಂಭ ಮಾಡಿದ ಮೇಲೆ ಸಣ್ಣಪುಟ್ಟ ಅಡೆತಡೆಗಳು ಬರುವುದು ಸಾಮಾನ್ಯ. ಸಾಮಾನ್ಯ ಮನಸ್ಥಿತಿಯುಳ್ಳ ಜನರು ಇಂಥ ಸಾಮಾನ್ಯ ಅಡೆತಡೆಗಳಿಗೆ ಹೆದರಿ, ಮುಂದೆ ಹೋಗಲು ಭಯಗೊಳ್ಳುತ್ತಾರೆ. ಮುಂದೇನಾಗುವುದೋ ಎಂಬ ಆತಂಕದಲ್ಲಿ ಹಿಂದೆ ಸರಿಯುತ್ತಾರೆ. ತಮ್ಮ ಕನಸನ್ನು ಶುರುವಾತಿನಲ್ಲಿಯೇ ಅರ್ಧಕ್ಕೆ ಕೈ ಬಿಡುತ್ತಾರೆ. ನೋಡು ನೋಡುತ್ತಿದ್ದಂತೆಯೇ ತಮ್ಮ ಯೋಜನೆಗೆ ಎಳ್ಳು ನೀರು ಬಿಡುತ್ತಾರೆ. ಆದರೆ ಸಾಧಿಸಲೇಬೇಕೆಂಬ ಛಲವುಳ್ಳವರು ಮುಂದಿಟ್ಟ ಹೆಜ್ಜೆ ಹಿಂದೆ ತೆಗೆಯದೆ ಮುನ್ನುಗ್ಗುತ್ತಾರೆ. ಈ ಸಾಮಾನ್ಯರೇ ಮುಂದೆ ಹೋಗಿ ಅಸಾಮಾನ್ಯರಾಗುತ್ತಾರೆ. ನೆನಪಿಡಿ: ಇಂದು ನೂರಾರು ಕೋಟಿ ವಹಿವಾಟು ನಡೆಸುವ ಕಂಪನಿಗಳು ಸಹ ಒಂದು ಚಿಕ್ಕ ಕೊಠಡಿಯಲ್ಲಿ ಸಣ್ಣ ಬಂಡವಾಳದೊಂದಿಗೆ ಆರಂಭವಾದವುಗಳೇ!
ಗೆಲುವಿನ ಹಾದಿಯಲ್ಲಿ ಪುಟ್ಟ ಹೆಜ್ಜೆ ಇಡುವ ಮುನ್ನ ಮತ್ತು ನಂತರ ಯಾವ್ಯಾವ ಅಂಶಗಳನ್ನು ಗಮನಿಸಬೇಕೆಂದು ನೋಡೋಣ ಬನ್ನಿ
ಸ್ಪಷ್ಟ ಗುರಿ
‘ಗುರಿಯಿಲ್ಲದ ಜೀವನ, ದಾರಿಯಿಲ್ಲದ ಪಯಣವಿದ್ದಂತೆ ಎಲ್ಲಿಗೆ ತಲುಪಬೇಕು ಎಂಬುದು ಸ್ಪಷ್ಟವಾಗಿದ್ದರೆ ಮಾತ್ರ ಪ್ರಯಾಣ ಸುಖವಾಗಿರುತ್ತದೆ.’ ನಿಗದಿತ ಗುರಿ ಇಲ್ಲದ ಪಯಣ, ವಿಳಾಸವಿಲ್ಲದ ಪತ್ರದಂತೆ ಅದು ಎಲ್ಲಿಗೂ ತಲುಪುವುದಿಲ್ಲ. ಅಂತೆಯೇ ಗುರಿಯಿಲ್ಲದ ಜೀವನದ ಕತೆಯೂ ಆಗುತ್ತದೆ. ‘ಗುರಿ ಸ್ಪಷ್ಟವಾಗಿದ್ದರೆ ದಾರಿ ಕಷ್ಟವೆನಿಸುವುದಿಲ್ಲ.’ ನೀವು ಏನನ್ನು ಸಾಧಿಸಲು ಬಯಸುತ್ತಿದ್ದೀರಿ ಎಂಬುದನ್ನು ಮೊದಲೇ ನಿರ್ಧರಿಸಿ. ಅದನ್ನು ಒಂದು ಹಾಳೆಯಲ್ಲಿ ದೊಡ್ಡದಾಗಿ ಬರೆದು ನಿಮಗೆ ಮೇಲಿಂದ ಮೇಲೆ ಕಾಣುವಂತೆ ತೂಗು ಹಾಕಿ. ‘ನಿಮ್ಮ ಗುರಿಯು ಕೇವಲ ಕನಸಾಗಿರಬಾರದು ಅದು ನಿಮ್ಮನ್ನು ನಿದ್ದೆಯಿಂದ ಎಬ್ಬಿಸುವ ಸಂಕಲ್ಪವಾಗಬೇಕು.’ ಎಂದಿದ್ದಾರೆ ಕಲಾಂಜಿ. ಸ್ವಾಮೀ ವಿವೇಕಾನಂದರ ನುಡಿಯಂತೆ ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.’
ಚಿಕ್ಕ ಚಿಕ್ಕ ಹಂತ
ಒಂದೇ ಬಾರಿ ದೊಡ್ಡ ಜಿಗಿತಕ್ಕೆ ಪ್ರಯತ್ನಿಸಿದರೆ ಬೀಳುವ ಭಯವಿರತ್ತದೆ. ಆದರೆ ಸಣ್ಣ ಹಂತಗಳಲ್ಲಿ ಸಾಗುವಾಗ ತಪ್ಪಾದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ. ಯಾವುದೇ ದೊಡ್ಡ ಗುರಿ ಮೊದಲ ನೋಟಕ್ಕೆ ದೊಡ್ಡ ಗುಡ್ಡದಂತೆ ಕಾಣುತ್ತದೆ. ಆದರೆ ಅದನ್ನು ದಿನದ ವಾರದ ಅಥವಾ ತಿಂಗಳದ ಗುರಿಯಾಗಿ ವಿಭಜಿಸಿದರೆ ಸುಲಭವಾಗಿ ಸಾಧಿಸಬಹುದು ಎಂದು ಅನಿಸುತ್ತದೆ. ಆದ್ದರಿಂದ ದೊಡ್ಡ ಗುರಿಯನ್ನು ತಲುಪಲು ಚಿಕ್ಕ ಚಿಕ್ಕ ಹಂತಗಳನ್ನು ರೂಪಿಸಿಕೊಳ್ಳಿ. ಪ್ರತಿಬಾರಿ ನೀವು ಸಣ್ಣ ಹಂತವನ್ನು ಪೂರ್ಣಗೊಳಿಸಿದಾಗ ನಿಮಗೆ ಖುಷಿಯಾಗುತ್ತದೆ. ಅದು ಮುಂದಿನ ಹಂತಕ್ಕೆ ಹೋಗಲು ಉತ್ಸಾಹ ತುಂಬುತ್ತದೆ.

ಕಲಿಕೆ
ಗುರಿಗೆ ಸಹಾಯಕವಾಗುವ ವಿಷಯಗಳನ್ನು ಪ್ರತಿದಿನವೂ ಕಲಿಯುವ ಆಸಕ್ತಿಯನ್ನು ತೋರಬೇಕು. ಗುರಿಗೆ ಪೂರಕವಾದ ಹೊಸ ವಿಷಯಗಳನ್ನು ಕಲಿಯುವಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಳ್ಳಬೇಕು. ನಿಮ್ಮ ಗೆಲುವಿಗೆ ಸಹಾಯ ಮಾಡುವ ಒಳ್ಳೆಯ ಅಂಶಗಳು ಎಲ್ಲಿಂದಲೇ ಬಂದರೂ ಯಾರಿಂದಲೇ ಬಂದರೂ ಅವುಗಳನ್ನು ಸ್ವಾಗತಿಸಿ. ಗೊತ್ತಿಲ್ಲದ ಸಂಗತಿಗಳನ್ನು ಮನಸ್ಸಿಟ್ಟು ಕಲಿಯಿರಿ. ಕಲಿಕೆಯ ಹಾದಿಯಲ್ಲಿ ನಿಂದೆ ಟೀಕೆಗಳು ಬರದೇ ಇರುವುದಿಲ್ಲ. ಅಂಥ ಟೀಕೆಗಳಿಗೆ ಕಿವಿಗೊಡದೆ ನಿಮ್ಮ ಕಲಿಕೆಯತ್ತ ಗಮನಹರಿಸಿ.
ಸತತ ಪ್ರಯತ್ನ
ದೊಡ್ಡ ಗುರಿಗಿಂತಲೂ ಆ ಗುರಿಯತ್ತ ಸಾಗುವ ನಿರಂತರತೆ ಮುಖ್ಯ. ದಿನಕ್ಕೆ ಏಳೆಂಟು ಗಂಟೆ ಕೆಲಸ ಮಾಡಿ ಆರಂಭ ಶೂರತ್ವ ತೋರಿಸಿ ಸೋಲುವುದಕ್ಕಿಂತ ಪ್ರತಿದಿನ ಶ್ರದ್ಧೆಯಿಂದ ಒಂದು ಗಂಟೆ ಕೆಲಸ ಮಾಡುವುದು ದೊಡ್ಡ ಗೆಲುವಿಗೆ ಸಹಕಾರಿ.ನಮ್ಮಲ್ಲಿ ಬಹುತೇಕರು ಹಗಲುಗನಸು ಕಾಣುತ್ತಲೇ ಇರುತ್ತಾರೆ. ಹಗಲುಗನಸು ಕಾಣುತ್ತಲೇ ಹಗಲು ಕಳೆದುಬಿಡುತ್ತಾರೆ ಹೀಗಾಗಿ ಕನಸುಗಳೆಂದೂ ನನಸಾಗುವುದಿಲ್ಲ. ಸಾಧಿಸಿಯೇ ತೀರುತ್ತೇನೆಂಬ ಎದೆಗಾರಿಕೆ ಉಳ್ಳವರು ಸತತ ಪರಿಶ್ರಮ ಮತ್ತು ದೃಢ ಸಂಕಲ್ಪ ಹೊಂದಿರುವವರು ಮಾತ್ರ ಯಶಸ್ಸಿನ ಭಾಜನರಾಗುತ್ತಾರೆ.
ಏರುವುದು ಸುಲಭ
ಒಂದು ದೊಡ್ಡ ಏಣಿಯನ್ನು ಹತ್ತಲು ನೀವು ಮೊದಲು ಮೆಟ್ಟಿಲನ್ನೇ ಹತ್ತಬೇಕು. ಮೆಟ್ಟಿಲುಗಳು ಚಿಕ್ಕದಾಗಿದ್ದಷ್ಟೂ ಏರುವುದು ಸುಲಭ. ಗುರಿಯತ್ತ ಇಡುವ ಸಣ್ಣ ಹೆಜ್ಜೆಗಳು ನಮ್ಮ ಅನುಭವದ ಖಜಾನೆಗೆ ಕಾಣಿಕೆ ನೀಡುತ್ತವೆ. ಚಿಕ್ಕ ಚಿಕ್ಕ ಅನುಭವಗಳೇ ಮುಂದೆ ದೊಡ್ಡ ಗೆಲುವಿಗೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಆರಂಭಕ್ಕಾಗಿ ಸರಿಯಾದ ಸಮಯ ಶುಭ ಮುಹೂರ್ತಕ್ಕೆಂದು ಕಾಯದೆ ಈ ಸಮಯ ಶುಭ ಸಮಯ ಈ ದಿನ ಶುಭ ದಿನವೆಂದು ತಿಳಿದು ಸಣ್ಣ ಹೆಜ್ಜೆಯನ್ನು ಇಡಿ. ದೊಡ್ಡ ಗೆಲುವು ನಿಮ್ಮನ್ನು ತೆರೆದು ತೋಳುಗಳಿಂದ ಸ್ವಾಗತಿಸುತ್ತದೆ.


