ಸಂಪೂರ್ಣ ಕೈಕೊಟ್ಟ ಮಳೆ, ಹಸಿರಾಗದ ಇಳೆ | ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅನಿರ್ಧಿಷ್ಟ ಹೋರಾಟ ಪ್ರಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ 2026-27 ನೇ ಸಾಲಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವುದನ್ನು ತಿಳಿದಿದ್ದರೂ ಕೇವಲ 3 ತಾಲೂಕುಗಳನ್ನು ಬರಗಾಲವೆಂದು ಪರಿಗಣಿಸಿ ಉಳಿದ 10 ತಾಲೂಕುಗಳನ್ನು ಕೈ ಬಿಡಲಾಗಿದ್ದು ಕೂಡಲೇ ಜಿಲ್ಲೆಯ 13 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರದಿಂದ ಅನಿರ್ಧಿಷ್ಟ ಹೋರಾಟ ಪ್ರಾರಂಭ ಮಾಡಲಾಯಿತು.
ನಗರದ ಗಾಂಧಿ ವೃತ್ತದಿಂದ ಮೆರೆವಣಿಗೆ ಮೂಲಕ ಅಂಬೇಡ್ಕರ ವೃತ್ತದ ಹಿಂದುಗಡೆ ಹಾಕಿರುವ ಟೆಂಟಿನಲ್ಲಿ ಹೋರಾಟ ಪ್ರಾರಂಭ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ಮಾಡಲಾಯಿತು.
ಜಿಲ್ಲೆಯ ಎಲ್ಲ ಶಾಸಕರು ರಾಜೀನಾಮೆ ಕೊಡಲು ಆಗ್ರಹ
ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಾಡಲಾಗುವುದು. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಬೇಕು. ಇಲ್ಲವೇ ಜಿಲ್ಲೆಯ ಎಲ್ಲಾ 8 ಶಾಸಕರು ರಾಜೀನಾಮೆ ಕೊಟ್ಟು ನಮ್ಮ ಜೊತೆಗೆ ಬಂದು ಹೋರಾಟದಲ್ಲಿ ಕೂಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ನಾದ ಕೆ. ಡಿ ಗ್ರಾಮದ ಮಠಾಧಿಶರಾದ ಶಿವಾನಂದ ಹಿರೇಮಠ, ರಾಜ್ಯ ಉಪಾಧ್ಯಕ್ಷರಾದ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಮುಖಂಡರಾದ ಬಸನಗೌಡ ಪಾಟೀಲ ಯಾಡ್ಯಾಪೂರ, ರಾಮನಗೌಡ ಪಾಟೀಲ, ಶ್ರೀಶೈಲ್ ಮುಳಜಿ, ಅನಮೇಶ ಜಮಖಂಡಿ, ಸುರೇಶ ಕಿರೆಸೂರ್, ಮಾಳು ಪೂಜಾರಿ, ಸಂಗಪ್ಪ ಟಕ್ಕೆ, ಈರಪ್ಪ ಕುಳೆಕುಮಟಾಗಿ, ಶ್ರೀಶೈಲ ವಾಲಿಕಾರ, ಎಸ್. ಟಿ. ಪಾಟೀಲ, ಶಿವಾನಂದ ಹಿರೇಮಠ, ಶಾನೂರ್ ನಂದರಗಿ, ಸಂಗೀತಾ ರಾಠೋಡ, ಜಗದೇವಿ ಬಿರಾದಾರ, ಲಕ್ಷ್ಮಿ ಬಿರಾದಾರ, ಪ್ರಶಾಂತ ಭೂಸಾನೂರ, ಚೆನ್ನಮ್ಮ ಮೈತ್ರಿ ಸೇರಿದಂತೆ ನೂರಾರು ರೈತರಿದ್ದರು.
ರೈತರ ಬೇಡಿಕೆಗಳು
ಜಿಲ್ಲೆಯ 13 ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಬೇಕು.
ಪ್ರತಿ ಎಕರೆಗೆ 50 ಸಾವಿರ ಬರ ಪರಿಹಾರ ನೀಡಬೇಕು
ಬೆಳೆವಿಮೆ ತುಂಬಿರುವ ರೈತರಿಗೆ 50% ಮಧ್ಯಂತರ ವಿಮೆ ಕೂಡಲೇ ಬಿಡುಗಡೆ ಮಾಡಬೇಕು.
ಜಿಲ್ಲೆಯ ಎಲ್ಲಾ ಹಳ್ಳ, ಕೊಳ್ಳ, ಕೆರೆ ಕಾಲುವೆಗಳನ್ನು ಭರ್ತಿ ಮಾಡುಬೇಕು.
ಜಿಲ್ಲೆಯ ಎಲ್ಲಾ ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು.
ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಕೆಲಸ ಹಚ್ಚಿಕೊಡಬೇಕು.

