ರೈತರೊಂದಿಗೆ ಚರ್ಚೆ | ಅಹವಾಲು ಆಲಿಕೆ | ಹಾಳಾದ ತೊಗರಿ, ಬೆಳೆಯ ವೀಕ್ಷಣೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಆಗ್ರಹಿಸಿದರು.
ತಾಲ್ಲೂಕಿನ ಜಾಲವಾದ, ಬಮ್ಮನಜೋಗಿ, ಇಬ್ರಾಹಿಂಪೂರ ಗ್ರಾಮದ ಜಮೀನುಗಳಿಗೆ ಬುಧವಾರ ರೈತರೊಂದಿಗೆ ಭೇಟಿ ನೀಡಿ ಮಾತನಾಡಿದರು. ದೇವರಹಿಪ್ಪರಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ತಾಲ್ಲೂಕುಗಳ ವ್ಯಾಪ್ತಿಯ ಹತ್ತಿ, ತೊಗರಿ, ಕಬ್ಬು ಸಹಿತ ಬಿತ್ತನೆಯಾದ ಎಲ್ಲ ಬೆಳೆಗಳು ಮಳೆಯ ಕೊರತೆಯಿಂದ ಸಂಪೂರ್ಣ ಹಾಳಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಸಮಗ್ರ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರಾಜ್ಯ ಸರ್ಕಾರ ಈಗ ಘೋಷಣೆ ಮಾಡಿರುವ ೩ ತಾಲ್ಲೂಕುಗಳ ಜೊತೆಗೆ ಉಳಿದ ಜಿಲ್ಲೆಯ ೧೦ ತಾಲ್ಲೂಕುಗಳ ಬೆಳೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅಲ್ಲದೇ ಅಧಿಕಾರಿಗಳ ಮೂಲಕ ಪುನಃ ಸರ್ವೇ ಕಾರ್ಯ ಮಾಡಿಸುವುದರ ಮೂಲಕ ಬೆಳೆ ಪರಿಹಾರ, ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದರು.
ಜಾಲವಾದ ಗ್ರಾಮದ ರೈತ ರವಿಕಾಂತ ಮಣೂರ ವರ ತೊಗರಿ ಬೆಳೆ ಹಾಗೂ ಅಮೋಘಿ ಪೂಜಾರಿ ಅವರ ಹತ್ತಿ ಬೆಳೆ ಹಾಗೂ ಬಮ್ಮನಜೋಗಿ ಗ್ರಾಮದ ಮಲ್ಲನಗೌಡ ಪಾಟೀಲ ತಮ್ಮ ಹಾಳಾದ ಕಬ್ಬು ಬೆಳೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಮಾಜಿ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ಎಸ್.ಸಿ. ಮೋರ್ಚಾ ಅಧ್ಯಕ್ಷ ಮಲ್ಕು ಬಾಗೇವಾಡಿ, ರೈತರಾದ ಬಸವರಾಜ ಕಲ್ಲೂರ, ಹಣಮಂತ್ರಾಯ ಮಣೂರ, ಶಿವಾನಂದ ಹುಲ್ಲೂರ, ಧೂಳಪ್ಪ ಕರಿಕಬ್ಬಿ, ಬಿಜೆಪಿ ಪದಾಧಿಕಾರಿಗಳಾದ ಭೀಮನಗೌಡ ಲಚ್ಯಾಣ, ನಿಂಗನಗೌಡ ಪಾಟೀಲ, ಸೋಮು ದೇವೂರ, ಸಂಜು ಜಾಯವಾಡಗಿ, ರಾಘವೇಂದ್ರ ಗುಡಿಮನಿ, ಸಂಗು ಜನಗೊಂಡ, ಕಲ್ಮೇಶ ಬುದ್ನಿ, ದಯಾನಂದ ರಾಠೋಡ, ಶ್ರೀಶೈಲ ಯಂಭತ್ನಾಳ ಇದ್ದರು.

