ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯ, ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದ ಜೆರಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಆನಂದ ಅಂಬಲಿ ಅವರಿಗೆ ಐಪಿಎಫ್ ಕ್ಲಿನಿಕಲ್ ಲೀಡರ್‌ಶಿಪ್ ಅವಾರ್ಡ್-2026 ಪ್ರಶಸ್ತಿ ಲಭಿಸಿದೆ.
ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಮನಾರ್ಹ ಸೇವೆ ಹಾಗೂ ತಮ್ಮ ವಿಭಾಗದಲ್ಲಿ ತೋರಿದ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ನವದೆಹಲಿಯಲ್ಲಿ ಆಗಸ್ಟ್ 29 ಮತ್ತು 30ರಂದು ನಡೆದ 8ನೇ ವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ದೇಶದ ನಾನಾ ಭಾಗಗಳಿಂದ ತಮ್ಮ ತಮ್ಮ ವೈದ್ಯಕೀಯ ವಿಶೇಷ ವಿಭಾಗಗಳಲ್ಲಿ ಅತ್ಯುತ್ತಮ ವೈದ್ಯಕೀಯ ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುವ ಒಟ್ಟು 30 ಮಂದಿ ವೈದ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಡಾ. ಆನಂದ ಪಿ. ಅಂಬಲಿ ಅವರು ಜೆರಿಯಾಟ್ರಿಕ್ಸ್ ವಿಭಾಗದಲ್ಲಿ ಸಲ್ಲಿಸುತ್ತಿರುವ ವೈದ್ಯಕೀಯ ಸೇವೆ, ವಯೋವೃದ್ಧರ ಆರೋಗ್ಯ ಆರೈಕೆಯಲ್ಲಿ ತೋರಿದ ನಾಯಕತ್ವ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಯಲ್ ಕಾಲೇಜ್ ಆಫ್ ಫಿಜಿಷಿಯನ್ಸ್ ಆಫ್ ಎಡಿನ್‌ಬರ್ಗ್ನ ಅಧ್ಯಕ್ಷ ಪ್ರೊ. ಮಾರ್ಕ್ ಸ್ಟ್ರಾಚನ್, ನವೀನ ವೈದ್ಯರ ವೇದಿಕೆಯ ಅಧ್ಯಕ್ಷ ಡಾ. ಜುಗಲ ಕಿಶೋರ ಶರ್ಮಾ ಅವರು ಡಾ. ಆನಂದ ಪಿ. ಅಂಬಲಿ ಅವರಿಗೆ ಪ್ರಶಸ್ತಿ ಪ್ರಮಾಣಪತ್ರ ಹಾಗೂ ಪದಕವನ್ನು ಪ್ರದಾನ ಮಾಡಿದರು.
ಡಾ. ಆನಂದ ಪಿ. ಅಂಬಲಿ ಅವರಿಗೆ ಲಭಿಸಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಈ ಸಾಧನೆಗಾಗಿ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಕುಲಾಧಿಪತಿ ಬಿ. ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ, ಡಾ. ಅರುಣ ಚಂ. ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ವೈದ್ಯಕೀಯ ವಿಭಾಗದ ಡೀನ್ ಹಾಗೂ ಪ್ರಾಚಾರ್ಯೆ, ಡಾ. ತೇಜಸ್ವಿನಿ ವಲ್ಲಭ, ಹಿರಿಯ ಉಪಪ್ರಾಂಶುಪಾಲ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂಟೂರ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

