ತಿಕೋಟಾ ತಾಲೂಕಿನ ಸಿದ್ದಾಪುರ ಬಳಿಯ ಮಾನೆನದೊಡ್ಡಿಯಲ್ಲಿ ಸಚಿವ ಎಂ.ಬಿ.ಪಾಟೀಲ ರಿಗೆ ಕೃತಜ್ಞತೆ ಸಲ್ಲಿಸಿದ ಹೃದಯಸ್ಪರ್ಶಿ ಘಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬರಡು ಭೂಮಿಗೆ ನೀರು ಹರಿಸಿದ ಜಲನಾಯಕನನ್ನು ತೋಟಕ್ಕೆ ಕರೆದೊಯ್ದ ರೈತ ತಾನು ಬೆಳೆದ ಹೂವು ಮತ್ತು ತೆಂಗಿನಕಾಯಿಯನ್ನು ನೀಡಿ ಕೃತಜ್ಞತೆ ಸಲ್ಲಿಸಿದ ಹೃದಯಸ್ಪರ್ಶಿ ಘಟನೆ ಮಂಗಳವಾರ ತಿಕೋಟಾ ತಾಲೂಕಿನ ಸಿದ್ದಾಪುರ ಬಳಿಯ ಮಾನೆನದೊಡ್ಡಿಯಲ್ಲಿ ನಡೆಯಿತು.
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಮಾನೆನದೊಡ್ಡಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡಿದ್ದರು. ಆ ಕಾರ್ಯಕ್ರಮಕ್ಕೆ ಬಂದಿದ್ದ ಅದೇ ಗ್ರಾಮದ ರೈತ ವಸಂತ ಬೀರಪ್ಪ ಮಾನೆ ಸಚಿವರ ಬಳಿಗೆ ಬಂದು ತನ್ನ ತೋಟಕ್ಕೆ ಬರಲೇಬೇಕು ಎಂದು ಪ್ರೀತಿಯಿಂದ ಸಚಿವರನ್ನು ಕರೆದುಕೊಂಡು ಹೋದ.
ಅಲ್ಲಿ ತನ್ನ ತೋಟದಲ್ಲಿ ಬೆಳೆದಿದ್ದ ಹೂವುಗಳನ್ನು ಸಚಿವರಿಗೆ ತೋರಿಸಿದ. ಇದೆಕ್ಕೆಲ್ಲ ಸಚಿವರೇ ಕಾರಣ. ನನ್ನ ತಂದೆ- ತಾಯಿ ತನಗೆ ಜನ್ಮ ನೀಡಿದರೆ, ಸಚಿವ ಎಂ. ಬಿ. ಪಾಟೀಲರು ನೀರಾವರಿ ಮೂಲಕ ಬಾಳು ಹಸನಾಗಲು ಕಾರಣರಾಗಿದ್ದಾರೆ. ತನ್ನ ಬಳಿ 16 ಎಕರೆ ಜಮೀನಿದ್ದರೂ ಈ ಮುಂಚೆ ನೀರಾವರಿ ಸೌಲಭ್ಯವಿಲ್ಲದೆ, ಕೃಷಿಯನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳಲಾಗದೆ, ಅನಿವಾರ್ಯವಾಗಿ ನೆರೆಯ ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕೆ ತೆರಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದೆ. ನನ್ನಂತೆ ಉಳಿದ ರೈತರೂ ಕೂಡ ಸ್ವಂತ ಜಮೀನಿದ್ದರೂ ಅದರಲ್ಲಿ ಸಮೃದ್ಧವಾಗಿ ಕೃಷಿ ಮಾಡಲು ಸಾಧ್ಯವಾಗದೆ ಸಂಕಷ್ಟದ ಬದುಕು ನಡೆಸುತ್ತಿದ್ದರು. ಆದರೆ, ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳ ಫಲವಾಗಿ ಈಗ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದೆ. ಈಗ ನಮ್ಮಲ್ಲಿ ದುಷ್ಕಾಳ(ಬರ ಪರಿಸ್ಥಿತಿ) ಇದ್ದರೂ ನೀರಾವರಿಯಿಂದಾಗಿ ಅದರ ಅನುಭವವಾಗುತ್ತಿಲ್ಲ. ಇಂದು ಜಮೀನಿನಲ್ಲಿ ಹೂವುಗಳು ಅರಳುತ್ತಿವೆ. ಟೆಂಗಿನಕಾಯಿ ಬೆಳೆದಿದ್ದೇನೆ. ಶ್ರಾವಣ ಮಾಸದಲ್ಲಿ ಹೂವುಗಳಿಂದ ಪ್ರತಿನಿತ್ಯ ಸುಮಾರು ₹4 ಸಾವಿರ ಆದಾಯ ಗಳಿಸುತ್ತಿದ್ದೇನೆ. ಇದರ ಜೊತೆಗೆ ಕಬ್ಬು, ತೆಂಗು ಹಾಗೂ ತರಕಾರಿಗಳನ್ನೂ ಬೆಳೆದು ಕೃಷಿಯ ಮೂಲಕ ಸ್ವಾವಲಂಬಿ ಬದುಕು ನಡೆಸುತ್ತಿರುವುದಾಗಿ ತಿಳಿಸಿ ಸಚಿವರಿಗೆ ಹೂವು ಮತ್ತು ತೆಂಗು ಸಮರ್ಪಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೆಲವೇ ವರ್ಷಗಳ ಹಿಂದೆ ಇವರ ಹೊಲಕ್ಕೆ ಭೇಟಿ ನೀಡಿದ್ದೆ. ಅಂದು ಕಂಡಿದ್ದ ಅವರ ಕೃಷಿ, ತೋಟಗಾರಿಕೆಯ ಕಾಯಕ ಇಂದು ಇನ್ನಷ್ಟು ಏರುಗತಿಯಲ್ಲಿ ಸಾಗುತ್ತಿರುವುದು ಕಂಡು ಅಪಾರ ಸಂತಸ ತಂದಿದೆ. ಅವರ ಆತ್ಮೀಯ ಸ್ವಾಗತ ಮನಸ್ಸಿಗೆ ಮತ್ತಷ್ಟು ಹತ್ತಿರವಾಯಿತು. ತಾವೇ ಬೆಳೆದ ಹೂವುಗಳನ್ನು ಪ್ರೀತಿಯಿಂದ ತೋರಿಸಿ, ತಮ್ಮ ತೋಟದಲ್ಲಿ ಬೆಳೆದ ಎಳನೀರನ್ನು ಆತ್ಮೀಯತೆಯಿಂದ ನೀಡಿ ಸತ್ಕರಿಸಿದ ಅವರ ಸರಳತೆ, ಅಭಿಮಾನ, ಕೃತಜ್ಞತಾಭಾವ ಮತ್ತು ಆತಿಥ್ಯ ಹೃದಯಸ್ಪರ್ಶಿಯಾಗಿತ್ತು ರೈತನ ಪರಿಶ್ರಮದಿಂದ ಅರಳಿದ ಹೂವಿನ ಸುವಾಸನೆಯಷ್ಟೇ, ಅವರ ಆತಿಥ್ಯದಲ್ಲಿದ್ದ ಪ್ರೀತಿಯ ಸುವಾಸನೆಯೂ ಮನಸ್ಸಿನಲ್ಲಿ ಬಹುಕಾಲ ಉಳಿಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

