ಬ.ಕಲ್ಯಾಣ & ಕೂಡಲ ಸಂಗಮಕ್ಕೆ ನೀಡುವ ಮಹತ್ವ ಬಸವನ ಬಾಗೇವಾಡಿಗೂ ನೀಡಲಿ | ಶಾಸಕ ಶಿವಾನಂದ ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಸವಣ್ಣನ ಜನ್ಮಸ್ಥಳವಾದ ಬಸವನ ಬಾಗೇವಾಡಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಬೇಕು. ಬಸವ ಕಲ್ಯಾಣ ಹಾಗೂ ಕೂಡಲ ಸಂಗಮಕ್ಕೆ ನೀಡುವ ಮಹತ್ವವನ್ನು ಬಸವನ ಬಾಗೇವಾಡಿಗೂ ನೀಡುವ ಅಗತ್ಯವಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮಸೂತಿ ಗ್ರಾಮದಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹70 ಲಕ್ಷ ಅನುದಾನದಲ್ಲಿ ಗಣಪತಿ ವೃತ್ತದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ನಿರ್ಮಿಸಲಾಗುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಸವಣ್ಣನ ಜನ್ಮಸ್ಥಳದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಮೀನಮೇಷ ಎಣಿಸದೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಬಸವನ ಬಾಗೇವಾಡಿಗೆ ಹೆಚ್ಚಿನ ಆದ್ಯತೆ ದೊರೆಯುವಂತೆ ಪ್ರಯತ್ನಿಸಲಾಗುವುದು ಎಂದರು.
ಮಸೂತಿ ಗ್ರಾಮವು ಶೈಕ್ಷಣಿಕ ಕ್ಷೇತ್ರದ ಹರಿಕಾರ ಬಂಥನಾಳ ಶಿವಯೋಗಿಗಳನ್ನು ನಾಡಿಗೆ ನೀಡಿದ ಹೆಗ್ಗಳಿಕೆ ಹೊಂದಿದೆ. ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗಾಗಿ ಗ್ರಾಮಸ್ಥರು ತಮ್ಮ ಫಲವತ್ತಾದ ಜಮೀನುಗಳನ್ನು ತ್ಯಾಗ ಮಾಡಿದ್ದಾರೆ. ಇಂತಹ ತ್ಯಾಗಮಯ ಗ್ರಾಮಸ್ಥರ ಯಾವುದೇ ಅಭಿವೃದ್ಧಿ ಬೇಡಿಕೆಗಳಿದ್ದರೂ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಆಲಮಟ್ಟಿ ಆಣೆಕಟ್ಟು ವಿಚಾರದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾದರೆ 100 ಟಿಎಂಸಿ ನೀರಿನಲ್ಲಿ ಸುಮಾರು 80 ಟಿಎಂಸಿ ನೀರು ಜಿಲ್ಲೆಗೆ ದೊರೆಯಲಿದೆ. ಕ್ಷೇತ್ರದಲ್ಲಿ ನೀರಾವರಿ ವ್ಯಾಪ್ತಿ ಕಳೆದ ಎರಡು ದಶಕಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ 9ರಿಂದ 11 ಹೆಕ್ಟೇರ್‌ನಷ್ಟಿದ್ದ ನೀರಾವರಿ ಪ್ರದೇಶ ಇದೀಗ 99 ಹೆಕ್ಟೇರ್ ಗಡಿ ತಲುಪಿದೆ ಎಂದು ತಿಳಿಸಿದರು.
ಕ್ಷೇತ್ರದ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಮಸ್ಯೆಯನ್ನೂ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು.
ಕಾಂಗ್ರೆಸ್ ಧುರೀಣ ತಾನಾಜಿ ನಾಗರಾಳ, ವೀರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂತೋಷ ಗಣಾಚಾರಿ ಮಾತನಾಡಿದರು. ತಹಸೀಲ್ದಾರ ಸಂತೋಷ ಮ್ಯಾಗೇರಿ, ತಾಪಂ ಇಒ ಸುನಿಲ ಮದ್ದಿನ, ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ ಪಕಾಲಿ, ಪ್ರಮುಖರಾದ ಬಸವರಾಜ ಸಾಲಳ್ಳಿ, ಸಿ.ಪಿ. ಪಾಟೀಲ, ಕೆ.ವಿ. ಕುಲಕರ್ಣಿ, ಬಸವರಾಜಗೌಡ ಪಾಟೀಲ, ರಾಜು ಬಿಸ್ಟಗೊಂಡ, ಡಾ.ವೈ.ಕೆ. ಹೂಗಾರ, ಶಿವನಗೌಡ ಪಾಟೀಲ, ಗುರುಶಾಂತಪ್ಪ ಸಾಲಳ್ಳಿ, ಗುರಪ್ಪ ಕಾಗಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂತೋಷ ಗಣಾಚಾರಿ ಸ್ವಾಗತಿಸಿದರು. ನವೀನ ಸಾಲಳ್ಳಿ ನಿರೂಪಿಸಿದರು. ಎಸ್.ಎಸ್. ಗರಸಂಗಿ ವಂದಿಸಿದರು.

