ವಿಜಯಪುರ ವೃಕ್ಷೋಥಾನ ಕುರಿತು ಬೆಂಗಳೂರು ಓಟಗಾರರಿಗೆ ಹಮ್ಮಿಕೊಂಡ ಸಭೆಯಲ್ಲಿ ಕೆ.ಎಸ್.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ, ಅರಣ್ಯ ಪ್ರದೇಶವು ಶೇಕಡಾ 0.17 ರಿಂದ ಶೇಕಡಾ 2.4 ಕ್ಕೆ ಏರಿಕೆಯಾಗಿದೆ ಎಂದು ಕೆ.ಎಸ್.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ ಹೇಳಿದರು.
ಬೆಂಗಳೂರು ಕರ್ನಾಟಕ ಟೆನ್ನಿಸ್ ಕ್ಲಬ್ ಸಭಾಂಗಣದಲ್ಲಿ ವಿಜಯಪುರ ವೃಕ್ಷೋಥಾನ ಕುರಿತು ಬೆಂಗಳೂರು ಓಟಗಾರರಿಗೆ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದ ಅವರು, ಶತ-ಶತಮಾನದ ವಿಜಯಪುರದಲ್ಲಿ ಕಾಡೇಮ್ಮೆ ಮತ್ತು ಕೃಷ್ಣಮೃಗಗಳು ಇಲ್ಲಿ ವಾಸಿಸುತ್ತಿದ್ದವು ಎಂಬುದು ವಿಜಯಪುರದ ಗೆಜೆಟಿಯರ್ ನಲ್ಲಿ ದಾಖಲಾಗಿದೆ. ನಂತರದಲ್ಲಿ ಸತತ ಬರಗಾಲ ಮತ್ತು ಅಂತರ್ಜಲ ಕುಸಿತದಿಂದ ಕಾಡು ನಾಶವಾಗಿ ಬರ ಭೂಮಿಯಿಂದ ಇಂಥಹ ಪ್ರಾಣಿಗಳು ಕಣ್ಮರೆಯಾಗಿದ್ದವು. ಇದೀಗ ಈ ಭಾಗದಲ್ಲಿ ನೀರಾವರಿ ಜೊತೆಗೆ ಅರಣ್ಯೀಕರಣಕ್ಕೂ ಆದ್ಯತೆ ನೀಡಿದ ಸಚಿವ ಎಂ.ಬಿ.ಪಾಟೀಲರ ವಿಶೇಷ ಪ್ರಯತ್ನದಿಂದ ಆರಂಭಗೊಂಡ ಕೋಟಿವೃಕ್ಷ ಅಭಿಯಾನದ ಪರಿಣಾಮ ಇಲ್ಲಿ ಅರಣ್ಯೀಕರಣ ಹೆಚ್ಚಳವಾಗಿದೆ. ವೃಕ್ಷೋಥಾನ್ ಹೆರಿಟೇಜ್ ರನ್ ಕೇವಲ ಓಟವಲ್ಲದೇ ಅದು ಚಿಕ್ಕ ಮಕ್ಕಳು, ಸ್ವಾಮೀಜಿಗಳು ಸೇರಿದಂತೆ ಎಲ್ಲಾ ವಯೋಮಾನದ ನಾಗರಿಕರು ಸೇರಿ ಆಚರಿಸುವ ಹಸಿರು ಹಬ್ಬವಾಗಿದೆ ಎಂದರು.
ಭಾರತದ ಪ್ರಮುಖ ಮ್ಯಾರಥಾನ್ ಗಳನ್ನು ಆಯೋಜಿಸುವ ಎನ್.ಇ.ಬಿ ಸ್ಪೋರ್ಟ್ಸ್ ಮುಖ್ಯಸ್ಥ ನಾಗರಾಜ ಅಡಿಗ ಮಾತನಾಡಿ, ಮ್ಯಾರಥಾನ್ ಅಂದರೆ 42 ಕಿ.ಮೀ ಓಟ. ವಿಜಯಪುರದಲ್ಲಿ ಮುಂದಿನ ದಿನಗಳಲ್ಲಿ 42ಕಿ.ಮೀ ಪುಲ್ ಮ್ಯಾರಥಾನ್ ಆಯೋಜಿಸಿದರೆ ನಮ್ಮ ಸಂಸ್ಥೆಯಿಂದ ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದರು.
ಕೈಗಾರಿಕೆ ಸಚಿವರ ಆಪ್ತಕಾರ್ಯದರ್ಶಿ ನರೇಂದ್ರ ಮಾತನಾಡಿ, ಬೆಳಗಿನ ಜಾವ ನಗರದ ಸುತ್ತಲಿನ ಯಾವುದೇ ರಸ್ತೆಗಳಿಗೂ ಹೋದರೂ ಜನರು ಸೈಕಲ್ ತುಳಿಯುತ್ತಿರುತ್ತಾರೆ ಇಲ್ಲ ಓಡುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಅಲ್ಲಿ ಬದಲಾವಣೆ ಬಂದಿದೆ. ಡ್ರಗ್ಸ್, ತಂಬಾಕುಗಳಿಗೆ ಯುವಕರು ದಾಸರಾಗುವ ಈ ಕಾಲದಲ್ಲಿ ಓಟಗಳು ಯುವಕರಲ್ಲಿ ಸಕಾರಾತ್ಮಕವಾಗುತ್ತವೆ ಇದು ವಿಜಯಪುರದಲ್ಲಿ ನೋಡಲು ಸಾಧ್ಯ ಎಂದರು.
ಬೆಂಗಳೂರಿನ ಓಟಗಾರರಾದ ಸಿದ್ದೇಶ ಹಣಮಂತಪ್ಪ, ರವಿ ಪಾಟೀಲ, ವೃಕ್ಷೋಥಾನ್ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಕೋಟಿವೃಕ್ಷ ಅಭಿಯಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ ವಂದಿಸಿದರು. ಪರಿಸರ ಪ್ರೇಮಿ ಪ್ರಕೃತಿ ಪ್ರಸನ್ನ, ನಮ್ಮ ಜೀವನದಲ್ಲಿ ಒಂದಾದರೂ ಸಸಿ ನೆಟ್ಟು, ಪೋಷಿಸುತ್ತೇವೆ ಎಂಬ ಪ್ರತಿಜ್ಞೆ ಬೋಧಿಸಿದರು.
ಬೆಂಗಳೂರು ರನ್ನಿಂಗ್, ಫಿಟ್ ಬಿಜ್, ಕಬ್ಬನ್ ಪಾರ್ಕ್ ರನ್ನರ್ಸ್ ಸೇರಿದಂತೆ ಹಲವು ರನ್ನಿಂಗ್ ಗ್ರುಪ್ ಸದಸ್ಯರು ಭಾಗವಹಿಸಿ, ವಿಜಯಪುರ ನಗರದಲ್ಲಿ ಡಿಸೆಂಬರ್ 13, 2026 ರಂದು ಆಯೋಜಿಸಿದ ವೃಕ್ಷೋಥಾನ್ ಹೆರಿಟೇಜ್ ರನ್ ನಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

