ವಿಜಯಪುರದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದ್ರಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ) ಕಾಯ್ದೆ–೨೦೧೩ರ ಕುರಿತು ಪ್ರತಿಯೊಬ್ಬರೂ ಸಮಗ್ರ ಅರಿವು ಹೊಂದಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದ್ರಿ ಹೇಳಿದರು. ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಮತ್ತು ಆಂತರಿಕ ದೂರು ನಿವಾರಣಾ ಸಮಿತಿ ಅಧ್ಯಕ್ಷರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರು ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ದೌರ್ಜನ್ಯ, ಕಿರುಕುಳ ಅಥವಾ ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿರಬಾರದು. ಸಮಸ್ಯೆ ಎದುರಾದ ಸಂದರ್ಭದಲ್ಲಿ ಕಾಯ್ದೆಯಡಿ ರಚಿಸಲಾಗಿರುವ ಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಗೌರವ ಕಾಪಾಡುವ ದೃಷ್ಟಿಯಿಂದ ಸ್ಥಳೀಯ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು. ಪಾಶ್ (PಔSಊ) ಕಾಯ್ದೆಯ ಉದ್ದೇಶ, ನಿಯಮಗಳು ಹಾಗೂ ಆಂತರಿಕ ದೂರು ಸಮಿತಿಯ ಪ್ರಮುಖ ಕರ್ತವ್ಯಗಳ ಕುರಿತು ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಸಮಗ್ರ ಅರಿವು ಹೊಂದಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಕಾಯ್ದೆಯ ಅರಿವು ಅತ್ಯಂತ ಮಹತ್ವದ್ದಾಗಿದೆ ಎಂದು ನಾಗಲಕ್ಷ್ಮೀ ಚೌದ್ರಿ ಹೇಳಿದರು.
ಮಹಿಳೆಯರು ಯಾವುದೇ ರೀತಿಯ ಅನ್ಯಾಯಕ್ಕೆ ಒಳಗಾದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಲಭ್ಯವಿರುವ ಉಚಿತ ಕಾನೂನು ಸೇವೆ ಪಡೆದುಕೊಳ್ಳಬೇಕು. ನೊಂದ ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಕಾನೂನು ಪರಿಹಾರ ಪಡೆಯಲು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಯೋಗದ ಅಧ್ಯಕ್ಷರು ಸಲಹೆ ನೀಡಿದರು.
ತರಬೇತಿದಾರ ಪ್ರಕಾಶ ಅವರು ಪಿಪಿಟಿ ಮೂಲಕ ಪಾಶ್ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್. ಹಾಗರಗಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ. ಸಂತೋಷಕುಮಾರ ಎಚ್. ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

