ವಿಜಯಪುರದಲ್ಲಿ ತನು ಪೌಂಡೇಷನ್ ವತಿಯಿಂದ ವಂದೇ ಮಾತರಂ ಪ್ರಶಸ್ತಿ ಪ್ರಧಾನ | ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶಪ್ರೇಮ ಎಂಬುದು ಕೇವಲ ಮಾತಿಗೆ ಸೀಮಿತವಾಗದೆ ಪ್ರತಿಯೊಬ್ಬ ನಾಗರಿಕನ ನಡವಳಿಕೆ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಪ್ರತಿಫಲಿಸಬೇಕು. ಆಗ ಮಾತ್ರ ಯುವಕರು ದೇಶಪ್ರೇಮಿಗಳಾಗಿ ಹೊರ ಹೊಮ್ಮುವುದಕ್ಕೆ ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.
ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ತನು ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ವಂದೇ ಮಾತರಂ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ದೇಶಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ದೇಶದ ಭದ್ರತೆ ಮತ್ತು ಪ್ರಗತಿ ಕೇವಲ ಗಡಿಯಲ್ಲಿ ನಿಲ್ಲುವ ಸೈನಿಕರಿಂದಷ್ಟೇ ಅಲ್ಲ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರತಿಯೊಬ್ಬ ನಾಗರಿಕನಿಂದ ಸಾಧ್ಯ. ಯುವಜನತೆ ಕೇವಲ ಭಾಷಣಗಳಿಗೆ ಮರುಳಾಗದೆ, ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಚಿಂತನೆ ಬೆಳೆಸಿಕೊಳ್ಳಬೇಕು. ಕುಸಿಯುತ್ತಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಇಂಥ ಕಾರ್ಯಕ್ರಮಗಳು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತವೆ. ಅದರ ಜೊತೆಗೆ ಸಮಾಜಮುಖಿ ಸೇವೆ ಮಾಡಿದರಿಗೆ ಸಾರ್ಥಕತೆಯ ಭಾವ ತಂದುಕೊಡುತ್ತವೆ ಎಂದು ಹೇಳಿದರು.
ಯುವಜನ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೇವಾಡಿ ಮಾತನಾಡಿ, “ಇಂದಿನ ಯುವಜನತೆಯೇ ನಾಳಿನ ದೇಶದ ಭವಿಷ್ಯ. ಕೇವಲ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಸಮಯ ವ್ಯರ್ಥ ಮಾಡದೆ, ದೇಶದ ಪ್ರಗತಿಗೆ ಧನಾತ್ಮಕವಾಗಿ ಶ್ರಮಿಸಬೇಕು. ಯುವಕರು ಮಾದಕ ವಸ್ತುಗಳಂತಹ ದುರಭ್ಯಾಸಗಳಿಂದ ದೂರವಿದ್ದು, ಕ್ರೀಡೆ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸಕ್ರಿಯರಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಚೇತನಾ ಶಿಕ್ಷಣ ಸಂಸ್ಥೆಯ ಚೇರಮನ್ ರಾಜೇಶ್ವರಿ ಜುಗತಿ ಮಾತನಾಡಿ, ಕೊರೊನಾ ಕಾಟಘಟ್ಟದಲ್ಲಿ ಮನುಷ್ಯನ ಮನಸ್ಥಿತಿಯನ್ನು ಉಲ್ಲೇಖಿಸಿ ಮಾತನಾಡಿ; ಕೋವಿಡ್ ಸಂಕಷ್ಟದ ದಿನಗಳನ್ನು ಸ್ಮರಿಸುತ್ತಾ, “ಕೋವಿಡ್ ನಮಗೆ ಕೇವಲ ಸವಾಲಾಗಿರಲಿಲ್ಲ, ಬದಲಿಗೆ ಮಾನವೀಯತೆ ಮತ್ತು ಸ್ವಾವಲಂಬನೆಯ ದೊಡ್ಡ ಪಾಠವನ್ನು ಕಲಿಸಿದೆ. ಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡುವ ಭಾರತೀಯರ ಸಾಂಸ್ಥಿಕ ಮತ್ತು ಸಾಮಾಜಿಕ ಕಳಕಳಿ ಇಡೀ ವಿಶ್ವಕ್ಕೆ ಮಾದರಿಯಾಯಿತು. ಅದರ ಜೊತೆಗೆ ಮನುಷ್ಯನ ಮುಖವಾಡವನ್ನು ಸಹ ಕಳಚುವಲ್ಲಿ ಯಶಸ್ವಿಯಾಯಿತು ಎಂದು ಹೇಳಿದರು.
ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎಸ್.ಟಿ ಬೋಳರೆಡ್ಡಿ, ವಿಶ್ರಾಂತ ಪ್ರಾಚಾರ್ಯ ವಿಜಯಕುಮಾರ ಕುರುಂದವಾಡೆ ಮಾತನಾಡಿದರು. ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ತನು ಪೌಂಡೇಷನ್ ಅಧ್ಯಕ್ಷ ವಿಜಯಕುಮಾರ ಕಾಳಶೆಟ್ಟಿ, ಅಪಾಧ್ಯಕ್ಷೆ ಹೇಮಾ ಕಾಳಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೩೦ ಜನ ಸಾಧಕರಿಗೆ ‘ವಂದೇ ಮಾತರಂ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗನಬಸವರಾಜ್ ಸ್ವಾಗತಿಸಿದರು, ಪಾಂಡುರಂಗ ಕುಲಕರ್ಣಿ ಪ್ರಾರ್ಥಿಸಿದರು, ಮಂಜುನಾಥ ಜುನಗೊಂಡ ಪ್ರಸ್ತಾವಿಕ ಮಾತನಾಡಿದರು, ಪ್ರಿಯಾರಾಣಿ ಅಂಬುರೆ ನಿರೂಪಿಸಿದರು.

