ವಿಜಯಪುರದಲ್ಲಿ ಹಿರಿಯ ಸಾಹಿತಿ ಸಿದ್ಧರಾಮ ಉಪ್ಪಿನರ ಕೃತಿ ‘ಅಲ್ಲಮನೊಂದಿಗೆ ಅನುಸಂಧಾನ’ ಬಿಡುಗಡೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಮಾನವ ಕುಲಂ ತಾನೊಂದೆ ವಲಂ’ ಎನ್ನುವ ಜೈನ ಸಾಹಿತ್ಯದ ಧ್ಯೇಯದ ಜೊತೆ ‘ಬಯಲನ್ನು ಬಿತ್ತಿದ’ ಅಲ್ಲಮನ ಅನುಸಂಧಾನವನ್ನು ಸಾಹಿತ್ಯ ಪರಿಷತ್ ಸಾಕಾರಗೊಳಿಸಿರುವುದು ಬಹಳ ವಿಶೇಷ ಎಂದು ಸಂಶೋದಕ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಷಹಾ ಪ್ರತಾಪಚಂದ ಘೀರಾಜಿ ಓಸ್ವಾಲ್ ಹಾಗೂ ಕಾಂತಿಲಾಲ ಪ್ರತಾಪಚಂದ ಓಸ್ವಾಲ್ ದತ್ತಿ ಉಪನ್ಯಾಸಗಳ ಅಂಗವಾಗಿ ನಡೆದ ಜೈನ ಧರ್ಮದ ತತ್ವಗಳು, ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಕುರಿತ ಉಪನ್ಯಾಸ ಮತ್ತು ಸಿದ್ದರಾಮ ಉಪ್ಪಿನ ಅವರ ‘ಅಲ್ಲಮನೊಂದಿಗೆ ಅನುಸಂಧಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೈನ ಧರ್ಮದ ಮೂಲ ಸೆಲೆ ಮಾನವೀಯತೆ. ಜ್ಞಾನ ಮತ್ತು ಚಾರಿತ್ರ್ಯದ ದಾರಿ ಹಾಕಿ ಕೊಟ್ಟವರು ಜೈನ ಪರಂಪರೆಯವರು. ದೀರ್ಘ ಸಾಹಿತ್ಯಿಕ ನೆಲೆಗೆ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಶ್ರೇಷ್ಠವಾಗಿದ್ದು, ಈ ಬುನಾದಿ ಭದ್ರಗೊಳಿಸುವಲ್ಲಿ ಜೈನ ಸಾಹಿತ್ಯದ ಪಾತ್ರ ಬಹಳವಿದೆ ಎಂದರು.
ಜೈನ ಸಾಹಿತ್ಯದಲ್ಲಿ ನಾಲ್ಕು ನೂರು ಕವಿಗಳು ಇದ್ದರು. ವಿಜಯಪುರ ಕೂಡ ಹಿಂದೆ ಬಸದಿಗಳ ಊರಾಗಿತ್ತು. ಪಂಪ, ರನ್ನ, ಪೊನ್ನ, ಜನ್ನರನ್ನು ನೆನೆಯಬೇಕು. ಈ ಕವಿಗಳಿಗೆ ರಾಜಾಶ್ರಯ ಸಿಕ್ಕಿದ್ದರಿಂದ ಕನ್ನಡ ಭಾಷೆ ಬೆಳೆಯಿತು. ರಾಜರು ಇವರನ್ನು ಬಂಗಾರದ ಹೂವಿನಿಂದ ಸತ್ಕರಿಸುತ್ತಿದ್ದರು. ಇದು ಅವರು ಸಾಹಿತ್ಯ, ಕವಿಗೆ ನೀಡಿದ ಮನ್ನಣೆ ಎಂದರು.
ಆನೆ ನಡೆದಿದ್ದೇ ಮಾರ್ಗ ಎನ್ನುವಂತೆ ಪಂಪನು ಮಾರ್ಗ ಕವಿಯಾಗಿದ್ದ. ಲೌಕಿಕ, ಆಗಮಿಕದ ಮೂಲಕ ಅವನು ಅನನ್ಯ ಅಕ್ಷರದ ಲೋಕ ತೆರೆದಿದ್ದಾನೆ. ‘ನೆನೆಯುವುದೆನ್ನ ಮನ ಬನವಾಸಿ’ ಎನ್ನುವ ಆತನ ಪ್ರತಿ ಸಾಲುಗಳು ಅಗಾಧ. ತೀರ್ಥಂಕರರ ಬಗ್ಗೆ ಬರೆದ ಎಲ್ಲ ಕವಿಗಳ ಸಾಹಿತ್ಯ ಮೋಕ್ಷಕ್ಕೆ ಕರದೊಯ್ಯುತ್ತವೆ. ನಮ್ಮ ಜಿಲ್ಲೆಯ ಹೆಮ್ಮೆ ಮಹಾಕವಿ ರನ್ನ ಸರಸ್ವತಿಯ ಭಂಡಾರ ಒಡೆದು ಬರೆದಿದ್ದೇನೆ ಎಂದು ಹೇಳಿದ್ದು ಓದುವುದೇ ಪುಣ್ಯ. ವಿಜಯಪುರದ ಕವಿ ನಾಗಚಂದ್ರನನ ಮೇಲೆ ಇನ್ನಷ್ಟು ಬೆಳಕು ಚೆಲ್ಲಬೇಕಿದೆ. ಪರಿಷತ್ ಜೈನ ತತ್ವ, ಸಾಹಿತ್ಯವನ್ನು ಸ್ಮರಿಸುತ್ತಿರುವುದು ಒಳ್ಳೆಯದು ಎಂದರು.
ಉಪನ್ಯಾಸ ನೀಡಿದ ಡಾ.ಆನಂದ ಕುಲಕರ್ಣಿ, ವಿಜಯಪುರದ ನಾಗಚಂದ್ರ ಅವರು ಕನ್ನಡದ ಮೊದಲ ರಾಮಾಯಣ ಬರೆದ ಕವಿ. ಇದು ನಮ್ಮವರಿಗೇ ಗೊತ್ತಿರಲಿಲ್ಲ. ಮಹಿಳಾ ವಿವಿಯಲ್ಲಿ ನಾಗಚಂದ್ರ ಪೀಠ ಮಾಡಿ, ಪಠ್ಯದಲ್ಲಿ ಅವರನ್ನು ಸೇರಿಸಬೇಕು. ನಮ್ಮವರನ್ನು ನಾವು ಗುರುತಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು,
ನಾಗಚಂದ್ರನ ಪುರಾಣದಿಂದಲೇ ವಿಜಯಪುರ ಎನ್ನುವ ಹೆಸರು ಬಂದಿದೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಜೈನ ಕವಿಗಳಿಗೆ ಸಲ್ಲುತ್ತದೆ ಎಂದರು.
ಕೃತಿ ಪರಿಚಯ
ಲೇಖಕಿ ಮಮತಾ ಮುಳಸಾವಳಗಿಯವರು ‘ಅಲ್ಲಮನೊಂದಿಗೆ ಅನುಸಂಧಾನ’ ಕೃತಿ ಪರಿಚಯ ಮಾಡಿ ಮಾತನಾಡಿ, ಅಂತರಾತ್ಮವನ್ನು ಜಾಗೃತಿಗೊಳಿಸುವ ಕೃತಿ ಇದಾಗಿದೆ. ಅಲ್ಲಮನು ಶೂನ್ಯದೊಂದಿಗೆ ನಡೆಸುವ ಆಂತರಿಕ ಹೊಯ್ದಾಟ ಇದರಲ್ಲಿದೆ. ದಾರ್ಶನಿಕತೆ ಜೊತೆಗೆ ಅಲ್ಲಮನ ಮೇಲೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಪುಸ್ತಕದ ಸಾಲುಗಳು ಮನ ಮುಟ್ಟಿ ಚಿಂತನೆಗೆ ಹಚ್ಚುತ್ತವೆ. ನೋವುಂಡ ನಜುಂಡವರಂತೆ ಉಪ್ಪಿನವರು ಅಲ್ಲಮನೊಂದಿಗೆ ಅನುಸಂಧಾನಗೊಂಡಿದ್ದಾರೆ ಎಂದರು.
ಪ್ರಾಧ್ಯಾಪಕ ಡಾ.ಎಂ.ಎಸ್. ಮಾಗಣಗೇರಿ ಅವರು ಅಧ್ಯಕ್ಷತೆ ವಹಿಸಿದ್ದರು. ಭೀಮನಗೌಡ ಬಿರಾದಾರ, ಅಮೀನಸಾಬ ಹಳ್ಳೂರ, ರಿಯಾನಾ ಬೇಗಂ ಹಳ್ಳೂರ ಅತಿಥಿಗಳಾಗಿದ್ದರು. ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ಮಾತನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ರಿಯಾಜ್ ಪಿಂಜಾರ ಸ್ವಾಗತಿಸಿದರೆ ವಿಜಯಲಕ್ಷ್ಮಿ ಹಳಕಟ್ಟಿ ವಂದಿಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ರಾಜಶೇಖರ ಭೋವಿ, ಬಸವರಾಜ ಮಾಡ್ಯಾಳ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಬಿ.ಕೆ.ಶೃತಿ, ಜಿಎಸ್ ಬಳ್ಳೂರ, ಶಶಿಕಲಾ ನಾಯ್ಕೋಡಿ, ಶಿವಕುಮಾರ ಉಪ್ಪಿನ, ಲತಾ ವಾಲೀಕಾರ (ಗುಂಡಿ), ಶರಣಮ್ಮ ಹಾದಿಮನಿ, ಗಂಗಮ್ಮ ರೆಡ್ಡಿ, ಸಮೃದ್ಧಿ ಆಕಳವಾಡಿ, ಶ್ರೀಕಾಂತ ನಾಡಗೌಡ, ಬಿ.ವಿ. ಪಟ್ಟಣಶೆಟ್ಟಿ, ಎಮ್.ಎಸ್.ನಿಂಬಾಳ, ಎಲ್.ಬಿ.ಶೇಖ್, ಪ್ರದೀಪ ನಾಯ್ಕೋಡಿ, ಸಹನಾ ಬಿರಾದಾರ, ಲಕ್ಷ್ಮಿ ಬಿರಾದಾರ, ಶಿವಲೀಲಾ ಬಿ.ಕೆ. ಅನೇಕರಿದ್ದರು.
ಅನುಸಂಧಾನ ಅಷ್ಟು ಸರಳವಲ್ಲ
ಅಲ್ಲಮನನ್ನು ತೆಕ್ಕೆಗೆ ಹಾಕಿಕೊಂಡು ಸಾಹಿತಿ ಸಿದ್ದರಾಮ ಉಪ್ಪಿನವರು ಪುಸ್ತಕ ಬರೆದಿದ್ದು ಅಪರೂಪದ ಸಂಗತಿ ಎಂದು ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ಶರಣ ಅಲ್ಲಮರದ್ದು ಸತ್ತವರ ಕತೆಯಲ್ಲ, ಅವರು ನಿತ್ಯ ಬಯಲು. ಇವರ ಬಗ್ಗೆ ಉಪ್ಪಿನವರು ಬರೆದಿರುವ ‘ಅಲ್ಲಮನೊಂದಿಗೆ ಅನುಸಂಧಾನ’ ಪುಸ್ತಕ ಬಿಡುಗಡೆಗೊಳಿಸಿದ್ದು ಪರಿಷತ್‌ನವರ ಕಾರ್ಯ ಶ್ಲಾಘನೀಯವಾಗಿದೆ. ಜೈನ ಸಾಹಿತ್ಯದ ಚರ್ಚೆ ಜೊತೆ ಶರಣ ಪರಂಪರೆಯ ಮೇರು ಅರಿವಿನ ಅಲ್ಲಮನ ಬಗೆಗಿನ ಕೃತಿ ಬಿಡುಗಡೆಗೊಂಡಿದ್ದು ಸಮಯೋಚಿತ ಎಂದರು.

