ಉದಯರಶ್ಮಿ ದಿನಪತ್ರಿಕೆ
ಚಡಚಣ: ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಯುವಶಕ್ತಿ ಅತ್ಯಗತ್ಯ. ಒಳ್ಳೆಯ ಶಿಕ್ಷಣ ಪಡೆಯಲು ಉತ್ತಮ ಶಿಕ್ಷಕರು, ಉತ್ತಮ ಸಂಸ್ಕೃತಿ ಬೆಳೆಸಲು ತಂದೆ-ತಾಯಿಯ ಪಾತ್ರ ಮುಖ್ಯವಾಗಿದ್ದು, ಸಮಾಜದ ಅಭಿವೃದ್ಧಿಗೆ ಯುವಕರ ಕೊಡುಗೆ ನಿರ್ಣಾಯಕವಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಝಳಕಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 2026-27ನೇ ಸಾಲಿನ ಸಂಸ್ಕೃತಿ, ಕ್ರೀಡೆ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ಸ್ಕೌಟ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಯುವಕರಲ್ಲಿ ಶಿಕ್ಷಣದ ಜ್ಯೋತಿ ಬೆಳಗಿದಾಗ ಮಾತ್ರ ಸಮಾಜ ಹಾಗೂ ದೇಶ ಪ್ರಗತಿಯತ್ತ ಸಾಗಲು ಸಾಧ್ಯ. ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ಸರ್ಕಾರಿ ಶಾಲಾ-ಕಾಲೇಜುಗಳು ಇಂಡಿ ತಾಲೂಕಿನಲ್ಲಿ ಇರುವುದೇ ಹೆಮ್ಮೆಯ ಸಂಗತಿ. ಆದರೆ ಶಾಲಾ-ಕಾಲೇಜುಗಳ ಸಂಖ್ಯೆ ಹೆಚ್ಚಿರುವುದಷ್ಟೇ ಮುಖ್ಯವಲ್ಲ. ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಅಭ್ಯಾಸ ಹಾಗೂ ಮೌಲ್ಯಗಳನ್ನು ಕಲಿಸಬೇಕು. ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.
ಶಿಕ್ಷಣದಿಂದ ಬುದ್ಧಿಶಕ್ತಿ ವೃದ್ಧಿಯಾದರೆ, ಕ್ರೀಡೆಯಿಂದ ದೈಹಿಕ ಆರೋಗ್ಯ ಸದೃಢವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಪಾಟೀಲ ಮಾತನಾಡಿ, ಉತ್ತಮ ಶಿಕ್ಷಣದಿಂದ ಜ್ಞಾನ ಮತ್ತು ವಿವೇಚನೆ, ಕ್ರೀಡೆಯಿಂದ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯ. ವಿದ್ಯಾರ್ಥಿಗಳು ಈ ಎರಡಕ್ಕೂ ಸಮಾನ ಆದ್ಯತೆ ನೀಡಬೇಕು ಎಂದರು.
ರಮೇಶ್ ಆರ್.ಎಚ್. ಮಾತನಾಡಿದರು. ಕಾರ್ಯಕ್ರಮದಲ್ಲಿ ನಾರಾಯಣ ಜಹಾಗೀರದಾರ, ಶ್ರೀಮಂತ ಕಾಪಸೆ, ಸಣ್ಣಪ್ಪ ತಳವಾರ, ಅಣ್ಣಪ್ಪ ತಳವಾರ, ಸತೀಶ ಹತ್ತಿ, ಹಣಮಂತ ತಳವಾರ, ಡಾ. ವಿವೇಕಾನಂದ ಉಘಡೆ, ಡಾ. ಸಂತೋಷ ದಂಡ್ಯಾಗೋಳ, ಅನಿಲ ಬಿರಾದಾರ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

