ಉದಯರಶ್ಮಿ ದಿನಪತ್ರಿಕೆ
ಚಡಚಣ: ನಾಗರ ಪಂಚಮಿ ಅಂಗವಾಗಿ ಶೀಗಣಾಪುರ ಗ್ರಾಮದಲ್ಲಿ ಭಕ್ತರು ನಾಗದೇವರಿಗೆ ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಜೀವಂತ ನಾಗರಹಾವು ಪ್ರತ್ಯಕ್ಷವಾಗಿ ದರ್ಶನ ನೀಡಿದ ಘಟನೆ ಭಕ್ತರಲ್ಲಿ ಕುತೂಹಲ ಹಾಗೂ ಭಕ್ತಿಭಾವ ಮೂಡಿಸಿದೆ.
ಗ್ರಾಮದ ಸಮಸ್ತ ತಾಯಂದಿರು ತಮ್ಮ ಕೈಯಿಂದ ತಯಾರಿಸಿದ ನಾಗರ ಹಾವಿನ ಮೂರ್ತಿಗಳಿಗೆ ಹಾಲು ಎರೆಯಲು ತೆರಳಿದ್ದರು. ಈ ವೇಳೆ ಶ್ರೀ ಲಕ್ಷ್ಮೀ ತಾಯಿ ಹಾಗೂ ಪವಾಡ ಪುರುಷ ಶ್ರೀ ರುದ್ರಮಹಾಯೋಗಿಗಳ ಆವರಣದಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಜೀವಂತ ನಾಗರಹಾವು ಪ್ರತ್ಯಕ್ಷವಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.
ಭಕ್ತರು ನಾಗದೇವರ ಮೂರ್ತಿಗೆ ಹಾಲು ಎರೆಯುತ್ತಿದ್ದ ವೇಳೆ ಸಮೀಪದಲ್ಲೇ ನಾಗರಹಾವು ಕಾಣಿಸಿಕೊಂಡಿದ್ದು, ಕೆಲಕಾಲ ಅಲ್ಲಿಯೇ ಇದ್ದು ಬಳಿಕ ತೆರಳಿದೆ ಎನ್ನಲಾಗಿದೆ. ಇದನ್ನು ಕಂಡ ಭಕ್ತರು ನಾಗರಾಜನೇ ಪ್ರತ್ಯಕ್ಷವಾಗಿ ದರ್ಶನ ನೀಡಿದ್ದಾನೆ ಎಂಬ ಭಾವನೆಯೊಂದಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.

