ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ನಾಗರ ಪಂಚಮಿ ವಿಶೇಷ ಸ್ಥಾನ ಪಡೆದಿದ್ದು, ಜಿಲ್ಲಾದ್ಯಂತ ಸೋಮವಾರ ನಾಗದೇವತೆಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಾಗರ ಪಂಚಮಿ ಹಬ್ಬವು ಪ್ರಕೃತಿ, ನಾಗಾರಾಧನೆ ಹಾಗೂ ಕುಟುಂಬ ಬಾಂಧವ್ಯದ ಸಂಕೇತವಾಗಿದೆ. ವಿಶೇಷವಾಗಿ ಮಹಿಳೆಯರು ಕುಟುಂಬದ ಸದಸ್ಯರ, ಸಹೋದರರ ಆರೋಗ್ಯ, ಆಯುಷ್ಯ, ಸುಖ ಸಮೃದ್ಧಿ ಹಾಗೂ ಯಶಸ್ಸಿಗಾಗಿ ನಾಗದೇವತೆಯನ್ನು ಪೂಜಿಸಿ ಪ್ರಾರ್ಥಿಸಿದರು.
ಮಕ್ಕಳು ಹಾಗೂ ಮಹಿಳೆಯರು ಹೊಸ ಬಟ್ಟೆ ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ನಾಗದೇವರ ದೇವಸ್ಥಾನ ಹಾಗೂ ಕಲ್ಲಿನಿಂದ ಕೆತ್ತಿದ ನಾಗದೇವರ ಮೂರ್ತಿಗಳ ಬಳಿ ಮಹಿಳೆಯರು ಸಾಲುಗಟ್ಟಿ ಪೂಜೆ ಸಲ್ಲಿಸಿದರು. ನಾಗದೇವತೆಗೆ ಹಾಲು, ತುಪ್ಪ, ಅರಿಶಿಣ, ಕುಂಕುಮ, ಹೂವು, ಹಣ್ಣು ಹಾಗೂ ವಿವಿಧ ಬಗೆಯ ನೈವೇದ್ಯ ಅರ್ಪಿಸಿ ಭಕ್ತಿಯಿಂದ ಪ್ರಾರ್ಥಿಸಿದರು. ಕಡುಬು ಸೇರಿದಂತೆ ಹಬ್ಬದ ವಿಶೇಷ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು.
ಗ್ರಾಮೀಣ ಭಾಗದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಸಾಂಪ್ರದಾಯಿಕ ಮೆರುಗು ಕಂಡುಬಂತು. ಮನೆಗಳಲ್ಲಿಯೂ ಹಿಟ್ಟಿನಿಂದ ನಾಗದೇವರ ಆಕೃತಿ ತಯಾರಿಸಿ, ಅದಕ್ಕೆ ಹಾಲೆರೆದು ಪೂಜೆ ಸಲ್ಲಿಸುವ ಪದ್ಧತಿ ನಡೆಯಿತು. ಬಂಧು ಬಳಗ ಹಾಗೂ ನೆರೆಹೊರೆಯವರನ್ನು ಮನೆಗೆ ಆಹ್ವಾನಿಸಿ ಹಬ್ಬದ ವಿವಿಧ ಖಾದ್ಯಗಳನ್ನು ಹಂಚಿಕೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಮಹಿಳೆಯರ ಜೋಕಾಲಿ ಸಂಭ್ರಮ
ನಾಗರ ಪಂಚಮಿಯ ಮತ್ತೊಂದು ವಿಶೇಷವೆಂದರೆ ಮಹಿಳೆಯರ ಸಂಭ್ರಮ. ಗ್ರಾಮಗಳಲ್ಲಿ ಜೋಕಾಲಿ ಹಾಕಿ ಆಡುವುದು, ಹಬ್ಬದ ಹಾಡುಗಳನ್ನು ಹಾಡುವುದು ಹಾಗೂ ವಿವಿಧ ಸಾಂಪ್ರದಾಯಿಕ ಆಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಕಂಡುಬಂತು. ಯುವಕರು ವಿವಿಧ ಕ್ರೀಡಾ ಹಾಗೂ ಮನರಂಜನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಬ್ಬಕ್ಕೆ ಮತ್ತಷ್ಟು ಮೆರುಗು ತಂದರು.

