ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ:ಪಟ್ಟಣದ ರಾವುತರಾಯ ವರ್ಣಾಲಂಕಾರ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಬಂಡಿ ಉತ್ಸವದ ಮೂಲಕ ಸ್ವಸ್ಥಾನವಾದ ದೇವಸ್ಥಾನ ಪ್ರವೇಶಿಸಿದನು.
ಪ್ರತಿವರ್ಷ ರಾವುತರಾಯ-ಮಲ್ಲಯ್ಯನ ಜಾತ್ರೆ ಐತಿಹಾಸಿಕ ಪ್ರಸಿದ್ಧವಾಗಿದೆ. ನಡುವೆ ಛಟ್ಟಿ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಉತ್ಸವದಲ್ಲಿ ರಾವುತರಾಯ ಪ್ರತಿವರ್ಷ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳುವುದು ಸಾಂಪ್ರದಾಯಿಕವಾಗಿ ನಡೆದು ಬಂದಿದೆ. ಆದರೆ ವರ್ಣಾಲಂಕಾರ ಕಾರಣವಾಗಿ ಮಲ್ಲಯ್ಯ ದೇವಸ್ಥಾನ ಪ್ರವೇಶಿಸಿದ ಸುಮಾರು ೪ ತಿಂಗಳು ತರುವಾಯ ವರ್ಣಾಲಂಕಾರ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಪುನಃ ಅದ್ದೂರಿ ಬಂಡಿ ಉತ್ಸವದೊಂದಿಗೆ ತನ್ನ ಮೂಲಸ್ಥಾನಕ್ಕೆ ಮರಳಿದನು.
ಮಲ್ಲಯ್ಯನ ದೇವಸ್ಥಾನದಲ್ಲಿ ಹೋಮಹವನಗಳು ಸಹಿತ ಎಲ್ಲ ಧಾರ್ಮಿಕ ಕಾರ್ಯಗಳು ಕೊನೆಗೊಂಡು ಗುರುವಾರ ಬಂಡಿ ಸಿದ್ಧಪಡಿಸುವ ಕಾರ್ಯ ಮುಗಿದು ಶುಕ್ರವಾರ ಬೆಳಿಗ್ಗೆ ತನ್ನ ಎಲ್ಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಡೊಳ್ಳುವಾಧ್ಯಗಳ ಸಂಭ್ರಮದಲ್ಲಿ ಬಂಡಿಯಲ್ಲಿ ಹೊರಟು ಸಿಡಿಗಟ್ಟೆಯ ಸ್ಥಳದಲ್ಲಿ ಕಾರಣೀಕರ ಮೂಲಕ ಭವಿಷ್ಯದ ಹೇಳಿಕೆಗಳನ್ನು ನುಡಿಸಲ್ಪಟ್ಟನು. ಕಾರಣೀಕರ ಹೇಳಿಕೆಯ ನಂತರ ದೇವಸ್ಥಾನದಲ್ಲಿ ಆಸೀನನಾದನು.
ಮೊದಲು ೨೦ ವರ್ಷಗಳಿಗೊಮ್ಮೆ ಇಲ್ಲವಾದರೆ ೧೨ ವರ್ಷಗಳಿಗೊಮ್ಮೆ ಅಲಂಕಾರನಾಗುತ್ತಿದ್ದ ರಾವುತರಾಯ ಕಳೆದ ವರ್ಷ ಕಾರಣೀಕರ ಮೂಲಕ ಅಲಂಕಾರದ ಕುರಿತು ಹೇಳಿದ್ದು ಈಗ ಕಾರ್ಯ ಸಂಪನ್ನಗೊಂಡಿದೆ. ಅಲಂಕಾರ ಕಾರ್ಯವನ್ನು ಗೋಕಾಕ ಪಟ್ಟಣದ ಚಿತಾರಿ ಕುಟುಂಬ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿದೆ. ಈ ಸಮಯದಲ್ಲಿ ಭಕ್ತರಿಗೆ ದರ್ಶನ ಸಂಪೂರ್ಣ ನಿಷೇಧಿಸಲಾಗಿತ್ತು.
ಕಾರಣೀಕರ ಭವಿಷ್ಯದ ಕುರಿತಾದ ನುಡಿಗಳು
ಅಲಂಕಾರ(ಬಣ್ಣ)ಬಾಳ ಮನಸ್ಸಿಗೆ ಬಂದೈತಿ, ಎಲ್ಲಾ ಮಳಿಗಳನ್ನು ಒಂದು ಸಲ ಕೊಡುತೀನಿ. ಗೋಧಿ, ಕಡಲಿ, ಅಗಸಿ, ಕುಸುಬಿ ಜೋಳದ ಬೆನ್ನು ಹತ್ತಿದವು. ಕರಿತಲಿ ಮಾನವಗ ಎಷ್ಟು ಹೇಳಿದರೂ ತಿಳಿಲಿಲ್ಲ. ಎಲ್ಲರೂ ಕೂಡಿ ಇದೇ ರೀತಿ ಶಾಂತ ರೀತಿಯಿಂದ ಮಾಡಿಕೊಂಡು ಹೋಗರಿ. ನೀವು ನನಂತಾ ಇದ್ದರ, ನಾನು ನಿಮ್ಮ ಬೆನ್ನ ಮೇಲೆ ಇರ್ತಿನಿ, ಏನೇ ಕಷ್ಟ ಬಂದರು ಲಿಂಗದಂಗ ಸಂರಕ್ಷಣೆ ಮಾಡತೀನಿ. ಸಪ್ತಾಹ ಮಾಡಿದರ ಸಮುದ್ರದ ಕೀಲಿ ಮುರುದು ಮಳಿ ತರ್ತೀನಿ. ಸಪ್ತಾಹ ಮಾಡದಿದ್ರ ನಿಮ್ಮ ಹಣೆಬರಹ ನಿಮ್ಮ ಸುತ್ತ. ಅಗಸ್ಯಾಗ ನೂಚ್ಚಿನ ಕಟ್ಟೆ ಕಟ್ಟಿನಿ. ಆದರ ಮುಂದ ಬಹಳ ಕಷ್ಟದ ದಿನಮಾನ ಬಂದಾವು ಎಚ್ಚರಕಿ.

