ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಶಿಕ್ಷಕ ವೃತ್ತಿ ಪವಿತ್ರವಾದದ್ದು. ಶಿಕ್ಷಕರಿಗೆ ನಿವೃತ್ತಿ ಎಂಬುದೇ ಇಲ್ಲ. ಅವರು ನೀಡಿದ ಜ್ಞಾನ, ಸಂಸ್ಕಾರ ಹಾಗೂ ಮೌಲ್ಯಗಳು ಸದಾ ಸಮಾಜದಲ್ಲಿ ಜೀವಂತವಾಗಿರುತ್ತವೆ ಎಂದು ಶಾಸಕ ಶಿವಾನಂದ ಎಸ್. ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ತಾಲೂಕು ಆಡಳಿತ ಹಾಗೂ ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಅಖಂಡ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರು ತಮ್ಮ ಕಾಯಕದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಿ ವೃತ್ತಿಯ ಘನತೆ ಕಾಪಾಡಬೇಕು. ಪಠ್ಯದ ಜತೆಗೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಸಾಧನೆಗೆ ಪ್ರೋತ್ಸಾಹಿಸುವ ಹಾಗೂ ಸಕಾರಾತ್ಮಕ ಕಲಿಕೆಯ ವಾತಾವರಣ ನಿರ್ಮಿಸುವ ಮೂಲಕ ಉತ್ತಮ ಮಾನವ ಸಂಪನ್ಮೂಲ ರೂಪಿಸಬೇಕು ಎಂದು ಹೇಳಿದರು.
ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಬಂಥನಾಳ ಶಿವಯೋಗಿಗಳು ಶೈಕ್ಷಣಿಕ ಕ್ರಾಂತಿ ಮಾಡಿದ್ದು, ನಾಡಿನಾದ್ಯಂತ ಮಠಾಧೀಶರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹದ ಜತೆಗೆ ಜ್ಞಾನದಾಸೋಹ ನೀಡುತ್ತಿರುವುದು ಆದರ್ಶಪ್ರಾಯ ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವನ ಬಾಗೇವಾಡಿ ವಿರಕ್ತ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿದರು.
ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ವೈ.ಎಸ್. ಸೋಮನಕಟ್ಟಿ, ಸಂತೋಷ ಮ್ಯಾಗೇರಿ, ಎ.ಡಿ. ಅಮರಾವದಗಿ, ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲಬುರ್ಗಿ, ಪಟ್ಟಣ ಪಂಚಾಯತ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಸಂತೋಷ ಗಣಾಚಾರಿ, ರಮೇಶ ಮಾಗಿ, ಮಹಿಬೂಬ್ ನಾಯಕೋಡಿ, ಕೆ.ಎಸ್. ದೇಸಾಯಿ, ಆರ್.ಬಿ. ಪಕಾಲಿ, ಪಿ.ಕೆ. ಗಿರಗಾಂವಿ, ಎಸ್.ಬಿ. ಪತಂಗಿ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪುಂಡಲೀಕ ಬೆಳ್ಳುಬ್ಬಿ ಅಧಿಕಾರಿಗಳಾದ ಷನ್ಮುಖಪ್ಪ ಅಂಬಲಿ, ಸುನೀಲ ನಾಯಕ, ಸುನೀಲ ಮದ್ದೀನ, ವೀರೇಶ ಹಟ್ಟಿ, ಅಶೋಕ ನಾಯಕ, ವಿ.ಎಸ್.ಡೋಣೂರ ಸೇರಿದಂತೆ ಅನೇಕರಿದ್ದರು.

