ಮೂಕ ಜೀವಿಗೆ ಮಾನವೀಯ ವಿದಾಯ | ತದ್ದೇವಾಡಿಯಲ್ಲಿ ಮಂಗನಿಗೆ ಅದ್ಧೂರಿ ಅಂತಿಮ ಸಂಸ್ಕಾರ | ಗ್ರಾಮಸ್ಥರಿಂದ ವಿಶಿಷ್ಟ ಗೌರವ
ಉದಯರಶ್ಮಿ ದಿನಪತ್ರಿಕೆ
ವರದಿ: ರಾಜಶೇಖರ ಡೋಣಜಮಠ
ಚಡಚಣ: ಮೂಕ ಜೀವಿಗಳ ಮೇಲಿನ ಪ್ರೀತಿ, ಕರುಣೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಅಪರೂಪದ ಘಟನೆಯೊಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮರಣ ಹೊಂದಿದ ಮಂಗನಿಗೆ (ವಾನರನಿಗೆ) ಗ್ರಾಮಸ್ಥರು ಮನುಷ್ಯರಿಗೆ ಸಲ್ಲಿಸುವ ರೀತಿಯಲ್ಲಿಯೇ ಗೌರವಪೂರ್ವಕವಾಗಿ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಿ, ಸಂಪ್ರದಾಯಬದ್ಧವಾಗಿ ಅಂತಿಮ ಸಂಸ್ಕಾರ ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸಂಚರಿಸುತ್ತಿದ್ದ ಮಂಗವು ಗ್ರಾಮದ ಜನರೊಂದಿಗೆ ಬೆರೆತು ಬದುಕುತ್ತಿತ್ತು. ಗ್ರಾಮಸ್ಥರು ಅದನ್ನು ತಮ್ಮ ಕುಟುಂಬದ ಸದಸ್ಯನಂತೆಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಮಂಗವು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರಲ್ಲಿ ದುಃಖದ ವಾತಾವರಣ ನಿರ್ಮಾಣವಾಯಿತು. ಬಳಿಕ ಗ್ರಾಮಸ್ಥರು ಸೇರಿ ಮಂಗನ ಪಾರ್ಥಿವ ಶರೀರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಹೂವಿನ ಹಾರಗಳಿಂದ ಹಾಗೂ ಹೊಸ ಬಟ್ಟೆಗಳಿಂದ ಅಲಂಕರಿಸಿದರು.
ನಂತರ ಗ್ರಾಮದ ಪ್ರಮುಖರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮಂಗನ ಪಾರ್ಥಿವ ಶರೀರವನ್ನು ಶೃಂಗರಿಸಿದ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯ ವೇಳೆ ಗ್ರಾಮಸ್ಥರು ಭಕ್ತಿಭಾವದಿಂದ ಅಂತಿಮ ನಮನ ಸಲ್ಲಿಸಿದರು. ಬಳಿಕ ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಈ ಅಪರೂಪದ ಕಾರ್ಯವು ಗ್ರಾಮದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ಜೀವ ಎಂದರೆ ಜೀವವೇ; ಅದು ಮನುಷ್ಯವಾಗಿರಲಿ ಅಥವಾ ಪ್ರಾಣಿಯಾಗಿರಲಿ, ಪ್ರತಿಯೊಂದು ಜೀವಿಗೂ ಗೌರವ ಸಲ್ಲಬೇಕು ಎಂಬ ಸಂದೇಶವನ್ನು ಗ್ರಾಮಸ್ಥರು ತಮ್ಮ ಕೃತಿಯ ಮೂಲಕ ಸಾರಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಯನ್ನು ಬೆಳೆಸುವಂತಹ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಮಹಾಂತೇಶ ಸ್ವಾಮಿ ಹೀರೆಮಠ ಅವರಿಂದ ಮಂತ್ರೋಪಚಾರಗಳೊಂದಿಗೆ ಪೂಜೆ ಹಾಗೂ ಅಂತಿಮ ಸಂಸ್ಕಾರ ಸಲ್ಲಿಸಲಾಯಿತು.
ಗ್ರಾಮದ ಪ್ರಮುಖರಾದ ಸಾಹೇಬಗೌಡ ಬಿರಾದಾರ, ಅಣ್ಣುಗೌಡ ಬಿರಾದಾರ, ಶ್ರೀಪತಿ ವಡಗಾಂವ, ಗುರಣ್ಣಾ ಗಚ್ಚಿನಕಟ್ಟಿ, ರಾಜು ಪಾಟೀಲ, ಮುತ್ತಣ್ಣಗೌಡ ಪಾಟೀಲ, ಗುರುಬಾಳ ನಾವಿ, ಶಿವಾನಂದ ಬಂಡಿ, ಸಿದ್ದಲಿಂಗ ಹೀರೆಮಠ, ಪ್ರದೀಪ ವಡಗಾಂವ, ಅನೀಲ ಬಿರಾದಾರ, ಪ್ರಶಾಂತ ವಡಗಾಂವ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ತದ್ದೇವಾಡಿ ಗ್ರಾಮಸ್ಥರ ಈ ಮಾನವೀಯ ನಡೆ ಸಮಾಜಕ್ಕೆ ಮಾದರಿಯಾಗಿದ್ದು, ಮೂಕ ಜೀವಿಗಳ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕೆಂಬ ಸಂದೇಶವನ್ನು ಬಲವಾಗಿ ಸಾರಿದೆ.

