ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಆದೇಶ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಡಳಿತಾತ್ಮಕ ಮತ್ತು ಯೋಜನೆ ಸಮರ್ಪಕ ಅನುಷ್ಠಾನದ ಹಿತದೃಷ್ಠಿಯಿಂದ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಒಂದು ಹೊಸ ವಿಭಾಗ ಮತ್ತು ಮೂರು ಉಪವಿಭಾಗ ಕಚೇರಿಗಳನ್ನು ಜಿಲ್ಲೆಯ ತಿಕೋಟಾದಲ್ಲಿ ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ತಿಕೋಟಾದಲ್ಲಿ ಕಚೇರಿಗಳನ್ನು ಪ್ರಾರಂಭಿಸುವಂತೆ ಜಲಸಂಪನ್ಮೂಲ ಇಲಾಖೆಗೆ ಈ ಮುಂಚೆಯೇ ಪತ್ರ ಬರೆದಿದ್ದೆ. ಈಗ ನಮ್ಮ ಮನವಿಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸ್ಪಂದಿದ್ದಾರೆ. ಸಚಿವರಿಗೆ ಧನ್ಯವಾದಗಳು. ನಮ್ಮ ಬೇಡಿಕೆಯಂತೆ ತಿಕೋಟಾ ಪಟ್ಟಣದಲ್ಲಿ ಹೊಸದಾಗಿ ಒಂದು ವಿಭಾಗ ಕಚೇರಿ ಮತ್ತು ಅದರ ಅಡಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ ಉಪವಿಭಾಗ- 1 ಮತ್ತು ಉಪವಿಭಾಗ- 2 ಹಾಗೂ ಉಪವಿಭಾಗ- 3 ತಿಕೋಟಾ ಹೊಸ ಕಚೇರಿಗಳನ್ನು ಪ್ರಾರಂಭಿಸಲು ಜಲಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.
ಅಲ್ಲದೇ, ಹೊಸ ಕಚೇರಿಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಕಟ್ಟಡ ಮತ್ತೀತರ ಮೂಲಭೂತ ಸೌಕರ್ಯ ನಿರ್ಮಾಣಕ್ಕಾಗಿ ಒಟ್ಟು ರೂ. 2.50 ಕೋಟಿ ಅನುದಾನ ಮತ್ತು ಕಚೇರಿಯ ಅಗತ್ಯಕ್ಕನುಗುಣವಾಗಿ ಸಿಬ್ಬಂದಿ ಒದಗಿಸಿ ಆದೇಶ ಹೊರಡಿಸಲಾಗಿದೆ ಎಂದು ಸಚಿವ ಎಂ. ಬಿ. ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

