ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಚಿಕ್ಕಪಡಸಲಗಿಯ ರಾಯಲ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ಚುನಾವಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ನೈಜ ಚುನಾವಣಾ ಮಾದರಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಂಗ್ಲ ಭಾಷಾ ಶಿಕ್ಷಕ ಶ್ರೀ ಸಂಗಮೇಶ ತೇಲಿಯವರು, ವಿದ್ಯಾರ್ಥಿ ಜೀವನದಲ್ಲಿಯೇ ಪ್ರಜಾಪ್ರಭುತ್ವದ ತತ್ವಗಳನ್ನು ಅರಿತುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಮತದಾನದ ಹಕ್ಕಿನ ಮಹತ್ವ, ಉತ್ತಮ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ಇಂತಹ ಶೈಕ್ಷಣಿಕ ಚುನಾವಣೆಗಳ ಮೂಲಕ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯುತ್ತಾರೆ ಎಂದು ತಿಳಿಸಿದರು.
ಶಾಲೆಯ ಮುಖ್ಯಮಂತ್ರಿ ಸೇರಿದಂತೆ ವಿವಿಧ ಸಚಿವ ಸಂಪುಟದ ಹುದ್ದೆಗಳಿಗೆ ಚುನಾವಣೆ ನಡೆಸಲಾಯಿತು. ನಾಮಪತ್ರ ಸಲ್ಲಿಕೆ, ಅಭ್ಯರ್ಥಿಗಳ ಪ್ರಚಾರ, ಮತದಾನ, ಮತದಾರರ ಬೆರಳಿಗೆ ಶಾಯಿ ಗುರುತು ಹಾಕುವುದು, ಮತ ಎಣಿಕೆ, ಫಲಿತಾಂಶ ಪ್ರಕಟಣೆ ಹಾಗೂ ಆಯ್ಕೆಯಾದ ಪ್ರತಿನಿಧಿಗಳ ಪ್ರಮಾಣವಚನ ಸ್ವೀಕಾರದವರೆಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನೈಜ ಚುನಾವಣೆಯ ಮಾದರಿಯಲ್ಲೇ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ವಿಶೇಷ ಉತ್ಸಾಹ ಮತ್ತು ಕುತೂಹಲ ಮೂಡಿಸಿತು.
ಚುನಾವಣಾ ಆಯುಕ್ತರಾಗಿ ಮುಖ್ಯಗುರು ಪಿ. ಬಿ. ಕಲ್ಯಾಣಿ, ರಿಟರ್ನಿಂಗ್ ಅಧಿಕಾರಿಯಾಗಿ ಸಿ. ಪಿ. ಹೊಸಪೇಟಿ, ಕಾವೇರಿ ಹಿರೇಮಠ ಹಾಗೂ ಲಕ್ಷ್ಮೀ ಕಲ್ಯಾಣಿ ಕಾರ್ಯನಿರ್ವಹಿಸಿದರು. ಚುನಾವಣಾ ಅಧಿಕಾರಿಗಳಾಗಿ ಪ್ರೀತಿ ಮಾಲೋಜಿ, ಅಶ್ವಿನಿ ಕಲ್ಯಾಣಿ, ರೂಪಾ ಪಿಡಶೆಟ್ಟಿ ಮತ್ತು ಕುಮಾರ ಸಿದ್ದೋಜಿ ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಂದೆಪ್ಪ ಕಾರಜೋಳ ಹಾಗೂ ಕಾರ್ಯದರ್ಶಿ ಜಿನಗೊಂಡ ಸಿದ್ದೋಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸುವ ಇಂತಹ ಶೈಕ್ಷಣಿಕ ಚಟುವಟಿಕೆಗಳು ಅತ್ಯಂತ ಶ್ಲಾಘನೀಯವಾಗಿದ್ದು, ಭವಿಷ್ಯದಲ್ಲಿ ಜವಾಬ್ದಾರಿಯುತ ನಾಗರಿಕರನ್ನು ರೂಪಿಸಲು ಸಹಕಾರಿಯಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

