ಲೇಖನ
– ಜಯಶ್ರೀ.ಜೆ.ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
‘ಕತ್ತಲೆಯ ದಾರಿಯಲ್ಲೂ ಗುರಿ ಸ್ಪಷ್ಟವಾಗಿದ್ದರೆ, ಬೆಳಕಿನ ಕಿರಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ.’ ಎನ್ನುವ ಮಾತೊಂದಿದೆ. ಗುರಿಯಿಲ್ಲದ ಜೀವನ ಗರಿ ಬಿಚ್ಚಲು ಸಾಧ್ಯವಿಲ್ಲ ಎಂಬುದು ಸರ್ವವೇದ್ಯ. ಆದ್ದರಿಂದಲೇ ಪ್ರತಿಯೊಬ್ಬರಿಗೂ ಜೀವನದಲ್ಲಿ ತನ್ನದೇ ಆದ ಒಂದು ಗುರಿ ಇರಲೇಬೇಕಾಗುತ್ತದೆ. ಗುರಿಯನ್ನು ನಿರ್ಧರಿಸಿದ ಮಾತ್ರಕ್ಕೆ ಅದನ್ನು ತಲುಪಲಾಗುವುದಿಲ್ಲ. ಏಕೆಂದರೆ ಗುರಿ ಸಾಧನೆಯ ಹಾದಿ ಹೂವಿನ ಹಾಸಿಗೆ ಆಗಿರುವುದಿಲ್ಲ. ಅದು ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿ. ಹೀಗಾಗಿಯೇ ಗುರಿಯನ್ನು ಹೊಂದಿದ ಎಲ್ಲರೂ ಸಾಧಕರಾಗುವುದಿಲ್ಲ. ಆ ಹಾದಿಯಲ್ಲಿ ಬರುವ ಕಲ್ಲು ಮುಳ್ಳುಗಳೆಂಬ ಅಡೆತಡೆಗಳನ್ನು ಯಾರು ಎದೆಗಾರಿಕೆಯಿಂದ ಎದುರಿಸುವ ಎದೆಯನ್ನು ಹೊಂದಿರುತ್ತಾರೋ ಅವರು ಮಾತ್ರ ಸಾಧಕರಾಗಬಲ್ಲರು. ಅಂದರೆ ಗುರಿಯ ದಾರಿಯಲ್ಲಿ ಅನೇಕ ತಡೆಗೋಡೆಗಳಿವೆ. ಯಾರು ಆ ಗೋಡೆಗಳನ್ನು ಧೈರ್ಯದಿಂದ ದಾಟುವ ಧೈರ್ಯ ಮಾಡುತ್ತಾರೋ ಅವರು ಇತಿಹಾಸ ಸೃಷ್ಟಿಸುತ್ತಾರೆ. ಈ ಮಾತಿಗೆ ಇತಿಹಾಸವೇ ಸಾಕ್ಷಿ.
‘ಗುರಿ ತಲುಪುವ ಹಾದಿಯಲ್ಲಿ ಕಲ್ಲು ಮುಳ್ಳುಗಳು ಇರುವುದು ಸಹಜ, ಆದರೆ ಅವು ನಿನ್ನನ್ನು ತಡೆಯಲು ಇರುವುದಲ್ಲ; ನಿನ್ನ ಹೆಜ್ಜೆಯ ವೇಗವನ್ನು ಪರೀಕ್ಷಿಸಲು ಇರುವುದು.’ ಎಂಬುದನ್ನು ಮನದಟ್ಟು ಮಾಡಿಕೊಂಡು ಗುರಿಯ ಹಾದಿಯಲ್ಲಿ ಬರುವ ಆಂತರಿಕ ಟ ತಡೆಗೋಡೆಗಳನ್ನು ತಡೆಯುವುದು ಹೇಗೆ ನೋಡೋಣ ಬನ್ನಿ.
ಯೋಜನೆಯ ಕೊರತೆ
ಪರೀಕ್ಷೆಗೆ ಮುನ್ನ ನಾನು ರ‍್ಯಾಂಕ್ ಪಡೆಯಬೇಕೆಂದು ಗುರಿ ಇಟ್ಟರೆ ಸಾಲದು. ದಿನಾಲೂ ಯಾವಾಗ ಓದಬೇಕು? ಎಷ್ಟು ಗಂಟೆ ಓದಬೇಕು? ಯಾವ ವಿಷಯ ಓದಬೇಕು ಎನ್ನುವ ಯೋಜನೆ ಹಾಕಿಕೊಳ್ಳಬೇಕು. ಯೋಜನೆ ಇರದಿದ್ದರೆ ರ‍್ಯಾಂಕ್ ಕನಸಾಗಿಯೇ ಉಳಿಯುತ್ತದೆ. ಅಲನ್ ಲಕಿನ್ ಉಲ್ಲೇಖದಂತೆ,’ ಉತ್ತಮ ಯೋಜನೆ ಎಂದರೆ ಭವಿಷ್ಯವನ್ನು ವರ್ತಮಾನಕ್ಕೆ ತರುವುದು, ಇದರಿಂದ ನೀವು ಈಗಲೇ ಅದರ ಬಗ್ಗೆ ಏನಾದರೂ ಮಾಡಬಹುದು.’ ಯೋಜನೆಯಿಲ್ಲದೇ ಗುರಿಯ ದಾರಿ ಅಸ್ತವ್ಯಸ್ತಗೊಳ್ಳುತ್ತದೆ. ಅಲ್ಲದೇ ಕೊನೆಯ ಕ್ಷಣದಲ್ಲಿ ಆತಂಕವನ್ನು ಹೆಚ್ಚಿಸುತ್ತದೆ. ಸರಿಯಾದ ಕಾಲಮಿತಿಯ ಯೋಜನೆಯನ್ನು ರೂಪಿಸಿಕೊಳ್ಳುವುದರ ಕೊರತೆಯು ಸಹ ಗುರಿ ಸಾಧನೆಯಲ್ಲಿ ತಡೆಗೋಡೆಯನ್ನು ನಿರ್ಮಿಸುತ್ತದೆ.’ಯೋಜನೆ ಎನ್ನುವುದು ಕತ್ತಲ ದಾರಿಯಲ್ಲಿ ನಮ್ಮ ಕೈಲಿರುವ ದೀಪದಂತೆ; ಅದು ನಮಗೆ ಮುಂದಿನ ಹೆಜ್ಜೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಯಾವುದೇ ಗುರಿಯ ಸಾಧನೆಗೆ ಯೋಜನೆ ಬಹುಮುಖ್ಯವಾಗಿದೆ. ಗುರಿಯ ಹಾದಿಯಲ್ಲಿ ಬರಬಹುದಾದ ಸಮಸ್ಯೆಗಳನ್ನು ಮೊದಲೇ ಊಹಿಸಿ ಅವುಗಳಿಗೆ ಪರ್ಯಾಯ ಮಾರ್ಗಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಯೋಜನೆ ಸಹಾಯ ಮಾಡುತ್ತದೆ. ಬೆಂಜಮಿನ್ ಫ್ರಾಂಕ್ಲಿನ್ ಹೇಳಿದಂತೆ,’ ಯೋಜನೆ ರೂಪಿಸಲು ವಿಫಲರಾಗುವುದು ಎಂದರೆ, ನೀವು ಸೋಲಲು ಯೋಜನೆ ರೂಪಿಸುತ್ತಿದ್ದೀರಿ ಎಂದರ್ಥ.’ ಸರಿಯಾದ ಯೋಜನೆ ಇದ್ದರೆ ಕೆಲವನ್ನು ಯಾವಾಗ ಮಾಡಬೇಕು ಎಂಬ ಸ್ಪಷ್ಟತೆ ಸಿಗುತ್ತದೆ. ಇದರಿಂದ ಅನಗತ್ಯ ಗೊಂದಲಗಳು ನಿವಾರಣೆಯಾಗುತ್ತವೆ. ಅದಲ್ಲದೇ ಅಮೂಲ್ಯ ಸಮಯವೂ ಉಳಿಯುತ್ತದೆ.
ಗಮನ ಭಂಗ

ಗುರಿ ಸಾಧನೆಯಲ್ಲಿ ಮೊತ್ತಮೊದಲ ಅಡೆತಡೆ ಎಂದರೆ ಗುರಿಯನ್ನು ನಿರ್ಧರಿಸುವುದು ಆದರೆ ಅದರತ್ತ ಗಮನ ಹರಿಸದೇ ಇರುವುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳತ್ತ ಚಿತ್ತ ಹರಿಬಿಡುವುದೇ ಹೆಚ್ಚಾಗಿದೆ. ಅದರಲ್ಲೂ ಅನಗತ್ಯ ಮನರಂಜನೆ ಕಡೆಗೆ ಮನಸ್ಸು ವಾಲುತ್ತಿದೆ. ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ದಿನಗಳೆಯುತ್ತಿದ್ದರೆ ಗುರಿ ಸಾಧನೆ ಅಲ್ಲೇ ಉಳಿಯುವುದು. ‘ಯಾವುದಾದರೂ ಒಂದು ದೊಡ್ಡ ಗುರಿಯನ್ನು ನಿಮ್ಮ ಜೀವನದ ಮಹಾತ್ವಾಕಾಂಕ್ಷೆಯನ್ನಾಗಿ ಮಾಡಿಕೊಳ್ಳಿ. ಅದರ ಬಗ್ಗೆಯೇ ಯೋಚಿಸಿ, ಅದರ ಕನಸು ಕಾಣಿ ಮತ್ತು ಆ ಗುರಿಯಲ್ಲೇ ಬದುಕಿ.’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಅವರ ದಿವ್ಯವಾಣಿಯಂತೆ ಗುರಿ ದಾರಿಯಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಬೇಕು. ಅದರಂತೆಯೇ ’ನಿಮ್ಮ ಗುರಿ ಸಣ್ಣದಾಗಿರುವುದು ದೊಡ್ಡ ಅಪರಾಧ, ಯಾವಾಗಲೂ ನಿಮ್ಮ ಗುರಿ ಆಕಾಶದಷ್ಟು ಎತ್ತರವಾಗಿರಲಿ.’ ಎನ್ನುವ ಸ್ಪೂರ್ತಿದಾಯಕ ನುಡಿ ಅಬ್ದುಲ್ ಕಲಾಂಜಿಯವರದು.
ಆಲಸ್ಯತನ
‘ಆಲಸ್ಯತನ ಏಳಗೊಡುವುದಿಲ್ಲ, ಉತ್ಸಾಹ ಕೂಡ್ರಿಸಿಕೊಡುವುದಿಲ್ಲ.’ ಎನ್ನುವ ಮಾತಿನಂತೆ ಆಲಸ್ಯತನಕ್ಕೆ ಬಲಿಯಾದರೆ ಕಥೆ ಮುಗಿದಂತೆಯೇ ಸರಿ. ಅದು ನಮಗೆ ಕೆಲಸವನ್ನು ಮುಂದೂಡುವುದನ್ನು ಚೆನ್ನಾಗಿ ಕಲಿಸುತ್ತದೆ. ಮುಂದೂಡುವುದರಿಂದ ಗುರಿಗಳು ಗುರಿಗಳೇ ಆಗಿ ಉಳಿಯುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಕೇವಲ ಆಸೆಪಡುವುದರಿಂದ ಅಥವಾ ಕನಸು ಕಾಣುವುದರಿಂದ ಗುರಿ ಸಾಧಿಸಲು ಸಾಧ್ಯವಿಲ್ಲ. ಆ ಕನಸಿಗೆ ಜೀವ ತುಂಬಬೇಕು. ಅದನ್ನು ನನಸಾಗಿಸುವ ಏಕೈಕ ಶಕ್ತಿ ಇರುವುದು ಶ್ರಮದಲ್ಲಿ ಮಾತ್ರ. ‘ಗುರಿಯಿರಲಿ ಸಿಂಹದಂತೆ, ಶ್ರಮವಿರಲಿ ಮೌನದಂತೆ.’ ಶ್ರಮವಿಲ್ಲದ ಗುರಿ ಕೇವಲ ಹಗಲುಗನಸಾಗಿ ಉಳಿಯುತ್ತದೆ. ನಿರಂತರ ಶ್ರಮಪಟ್ಟಾಗ ಅದರಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳುತ್ತ ದಿನದಿಂದ ದಿನಕ್ಕೆ ಉತ್ತಮಗೊಳ್ಳಬಹುದು ಮತ್ತು ಪರಿಣಿತಿ ಪಡೆಯಲು ಸಾಧ್ಯ. ಅದಲ್ಲದೇ ಶ್ರಮವು ಗುರಿಗೆ ಬೇಕಾದ ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಬೆಳೆಸುತ್ತದೆ. ಸಾಧನೆಯ ಹಾದಿಯಲ್ಲಿ ಕಠಿಣ ಶ್ರಮದ ಪಾತ್ರ ಅತ್ಯಂದ ದೊಡ್ಡದಾಗಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ‘ಶ್ರಮ ಪಡುವವನಿಗೆ ಅದೃಷ್ಟವೂ ಬೆನ್ನ ಹಿಂದೆ ನಿಲ್ಲುತ್ತದೆ.’ ‘ಬೇರೆಯವರಿಗಿಂತ ವೇಗವಾಗಿ ಓಡುವುದಲ್ಲ ಜೀವನ, ನಿಮ್ಮದೇ ಆದ ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪುವವರೆಗೆ ಶ್ರಮಿಸುವುದೇ ಜೀವನ.’

ಭಯ
ಸೋಲಿನ ಭಯ ನಮ್ಮನ್ನು ನಿಷ್ಕ್ರೀಯರನ್ನಾಗಿಸುತ್ತದೆ. ಹೊಸ ಅವಕಾಶಗಳನ್ನು ಒಪ್ಪಿಕೊಳ್ಳಲು ಹಿಂಜರಿಯುವಂತೆ ಮಾಡುತ್ತದೆ. ‘ಸೋಲಿಗೆ ಹೆದರಿ ಗುರಿ ಬದಲಿಸಬೇಡ, ಗೆಲ್ಲುವ ತನಕ ನಿನ್ನ ಪ್ರಯತ್ನದ ದಾರಿಯನ್ನು ಬದಲಿಸು.’ ಭಯವು ಗುರಿಯನ್ನು ಧೂಳಿಪಟ ಮಾಡುತ್ತದೆ. ಯಾವುದೇ ಗುರಿಯನ್ನು ಬೆನ್ನಟ್ಟುವ ಮುನ್ನವೇ ’ನಾನು ಇದರಲ್ಲಿ ಸೋತರೆ ಮನೆಯವರು ಏನನ್ನುತ್ತಾರೋ? ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆಯೋ ಎಂಬ ನಕಾರಾತ್ಮಕ ಯೋಚನೆ ಅಂದರೆ ಭಯ ಕಾಡುತ್ತದೆ. ‘ನನ್ನಲ್ಲಿ ಇತರರಿಗಿಂತ ಪ್ರತಿಭೆ ಕಡಿಮೆಯಿದೆ’ ಎನ್ನುವ ಕೀಳರಿಮೆಯೂ ಕಾಡುತ್ತದೆ. ಇದಕ್ಕೆ ಕಾರಣ ಪೋಷಕರು, ಸ್ನೇಹಿತರು, ಸಮಾಜ ನಮ್ಮಿಂದ ಸದಾ ಗೆಲುವನ್ನೇ ನಿರೀಕ್ಷಿಸುತ್ತಾರೆ ಎಂಬ ಅತಿಯಾದ ಒತ್ತಡ. ಸೋಲು ಎನ್ನುವುದು ಬದುಕಿನ ಅಂತ್ಯವಲ್ಲ. ಅದು ಒಂದು ಉತ್ತಮ ಪಾಠ. ‘ನಾನು ಸೋತೆ’ ಎನ್ನುವುದಕ್ಕಿಂತ ‘ಹೊಸದನ್ನು ಕಲಿತೆ’ ಎಂದು ಯೋಚಿಸಬೇಕು. ಸೋಲಿನತ್ತ ನೋಡುವ ದೃಷ್ಟಿಕೋನವನ್ನು ಬದಲಿಸಬೇಕು. ‘ನೋಡಬೇಕಾದ ದೃಷ್ಟಿ ಬದಲಾದರೆ ಸಾಲದು ತಲುಪಬೇಕಾದ ಗುರಿ ನೆಟ್ಟಗಿರಬೇಕು.’ ಸೋಲಿನ ಭಯದಿಂದ ದೂರ ಓಡಿದಷ್ಟೂ ಗೆಲುವು ಮತ್ತಷ್ಟು ಮುಂದೆ ಓಡುತ್ತದೆ ಕಾಡುತ್ತದೆ. ಯಾರು ಸೋಲಿಗೆ ಹೆದರುತ್ತಾರೋ, ಅವರು ಎಂದಿಗೂ ಗೆಲುವಿನ ರುಚಿಯನ್ನು ಸವಿಯಲು ಸಾಧ್ಯವಿಲ್ಲ. ಏಕೆಂದರೆ ಪ್ರಯತ್ನವೇ ಗೆಲುವಿನ ಮೊದಲ ಹೆಜ್ಜೆ.’ ಎಂಬುದನ್ನು ನೆನಪಿನಲ್ಲಿಟ್ಟು ಗುರಿಯತ್ತ ಹೆಜ್ಜೆ ಹಾಕಬೇಕು.
ತಾಳ್ಮೆ
ಇಂದಿನ ದಿನಗಳಲ್ಲಿ ನಮಗೆಲ್ಲ ತಕ್ಷಣದ ಯಶಸ್ಸು ಬೇಕಾಗಿದೆ. ‘ನದಿಗಳು ಕಲ್ಲು ಬಂಡೆಗಳನ್ನು ಒಡೆದು ಮುನ್ನುಗ್ಗುವುದು ತನ್ನ ಶಕ್ತಿಯಿಂದಲ್ಲ. ಬದಲಿಗೆ ತನ್ನ ನಿರಂತರವಾದ ತಾಳ್ಮೆಯ ಹರಿವಿನಿಂದ. ಹಾಗೆಯೇ ಗುರಿ ಸಾಧನೆಯು ರಾತ್ರೋರಾತ್ರಿ ಆಗುವುದಿಲ್ಲ. ಅದಕ್ಕೆ ಅವಿರತ ಶ್ರಮದ ಜೊತೆಗೆ ತಾಳ್ಮೆ ಬೇಕು. ಬಹುತೇಕರು ತಾಳ್ಮೆ ಎಂದರೆ ಸುಮ್ಮನೇ ಕುಳಿತುಕೊಳ್ಳುವುದು ಎಂದು ತಪ್ಪಾಗಿ ತಿಳಿಯುತ್ತಾರೆ. ಆದರೆ ನಿಜವಾದ ತಾಳ್ಮೆ ಎಂದರೆ, ಗುರಿಗಾಗಿ ದಿನವೂ ಹೆಜ್ಜೆ ಹಾಕುವುದು. ಮತ್ತು ಸರಿಯಾದ ಫಲಿತಾಂಶಕ್ಕಾಗಿ ಧೃತಿಗೆಡದೆ ಕಾಯುವ ಸಕಾರಾತ್ಮಕ ಮನಸ್ಥಿತಿಯಾಗಿದೆ. ತಾಳ್ಮೆಯಿಲ್ಲದ ಸಾಧನೆ ಅರ್ಧಕ್ಕೆ ನಿಂತುಹೋಗುವ ಹಡಗಿನಂತೆ. ತಾಳ್ಮೆಯಿಲ್ಲದವನು ಮೊದಲ ಪ್ರಯತ್ನ ಫಲ ನೀಡದಿದ್ದರೆ ಗುರಿಯನ್ನು ಬಿಟ್ಟು ಬಿಡುತ್ತಾನೆ. ಗುರಿ ಸಾಧನೆಯ ಹಾದಿಯಲ್ಲಿ ಸಮಸ್ಯೆಗಳು ಕಷ್ಟಗಳು ಸಾಮಾನ್ಯ. ಅವೆಲ್ಲ ತಾತ್ಕಾಲಿಕ ಎಂದು ತಿಳಿಯಬೇಕು. ಅವುಗಳಿಗೆ ಬೇಸರಿಸಿಕೊಳ್ಳದೇ ಸಹಿಸಿಕೊಳ್ಳಬೇಕು. ಬೀಜವೊಂದು ದೊಡ್ಡ ಮರವಾಗಲು ಸಮಯ ಬೇಕಾಗುತ್ತದೆ. ಅಂತೆಯೇ ನಮ್ಮ ಶ್ರಮವೂ ಫಲ ನೀಡಲು ಸಮಯ ಬೇಕಾಗುತ್ತದೆ.
ಕೊನೆ ಹನಿ
ತಡೆಗೋಡೆಗಳು ನಮ್ಮನ್ನು ತಡೆಯಲು ಬರುವುದಿಲ್ಲ. ಬದಲಿಗೆ ಗುರಿಯತ್ತ ನಮ್ಮಲ್ಲಿರುವ ಹಂಬಲವನ್ನು, ಛಲವನ್ನು ಪರೀಕ್ಷಿಸಲು ಬರುತ್ತವೆ. ನಮ್ಮಲ್ಲಿರುವ ಶಕ್ತಿಯನ್ನು ಹೊರತರಲು ಬರುತ್ತವೆ. ಎಲ್ಲ ಆಂತರಿಕ ಗೋಡೆಗಳನ್ನು ಧ್ವಂಸ ಮಾಡಿದರೆ ಯಾವ ತಡೆಗೋಡೆಯೂ ನಮ್ಮ ಗುರಿ ಸಾಧನೆಯನ್ನು ತಡೆಯಲು ಸಾಧ್ಯವಿಲ್ಲ. ಅಡೆತಡೆ ತಡೆದರೆ ವಿಜಯದ ನಗು ಬಿರಿಯುತ್ತದೆ. ಗೆಲುವು ನಮ್ಮನ್ನು ಬಾಚಿ ತಬ್ಬಿಕೊಳ್ಳುತ್ತದೆ.


