ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದ ತಂಡ ಮಂಗಳವಾರ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಅರ್ಪಿಸಿತು.
ಮನವಿ ಸಲ್ಲಿಸಿ ಮಾತನಾಡಿದ ಚಂದ್ರಶೇಖರ ನುಗ್ಗಲಿ, “ಆಲಮಟ್ಟಿಯ ಉದ್ಯಾನ ವೀಕ್ಷಿಸಲು ೬ ವರ್ಷ ಮೇಲ್ಪಟ್ಟ ಎಲ್ಲರಿಗೂ ಪೂರ್ತಿ ದರ ವಿಧಿಸಲಾಗುತ್ತಿದೆ. ಪ್ರವೇಶಕ್ಕೆ ಪ್ರತಿಯೊಬ್ಬರೂ ೨೫೦ ರೂ. ಪಾವತಿಸಬೇಕಾಗುತ್ತದೆ. ರಾಜ್ಯದ ಮೂಲೆ-ಮೂಲೆಗಳಿಂದ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಕ್ಕೆ ಬರುತ್ತಾರೆ. ಆದ್ದರಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್.ಕೆ.ಜಿಯಿಂದ ೮ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಯಾತ್ರಿ ನಿವಾಸ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆಯೂ ಅವರು ಮನವಿಯಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಸಲೀಂ ದಡೆದ, ಎಂ.ಎಸ್. ಯಳಮೇಲಿ, ಮುತ್ತು ಹೆಬ್ಬಾಳ, ವಿ.ಕೆ. ಮಸೂತಿ, ಪ್ರಭಾಕರ ಹೆಬ್ಬಾಳ, ಕೆ.ಬಿ. ಹಣಗಿ, ವೀರಭದ್ರಯ್ಯ ಮಠ, ಆರ್.ಜಿ. ಪತ್ತಾರ ಸೇರಿದಂತೆ ಹಲವರು ಇದ್ದರು.
ಮನವಿ ಸ್ವೀಕರಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, “ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೆಬಿಜೆಎನ್‌ಎಲ್ ಎಂಡಿ ಅವರಿಗೆ ಸೂಚಿಸುತ್ತೇನೆ” ಎಂದು ಭರವಸೆ ನೀಡಿದರು.

