ಒಂದು ಟನ್ ಗೆ ₹2500-3000 ಸಾವಿರ ಇದ್ದ ಬೆಲೆ ಈಗ ಟನ್‌ಗೆ ₹4,500 ರವರೆಗೆ ಬೆಲೆ
ಉದಯರಶ್ಮಿ ದಿನಪತ್ರಿಕೆ
ವರದಿ : ಶ್ರೀಕಂಠ ಈಶ್ವರ್
ಎಚ್ ಡಿ ಕೋಟೆ: ತಾಲೂಕಿನಲ್ಲಿ ಮಳೆ ಕೊರತೆ ನಡುವೆಯೂ ಮುಸುಕಿನ ಜೋಳ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.
ಕೆಲವು ಪ್ರದೇಶಗಳಲ್ಲಿ ಬೂಜು ಮತ್ತು ಬಿಳಿ ಸುಳಿ ರೋಗದ ಬಾಧೆ ಜೊತೆಗೆ ಬೆಳೆ ಸಮಸ್ಯೆಗಳು ಎದುರಾದರೂ ನೀರಾವರಿ ಸೌಲಭ್ಯ ಮತ್ತು ಸಮರ್ಪಕ ನಿರ್ವಹಣೆ ಮಾಡಿದ ರೈತರಿಗೆ ಮುಸುಕಿನ ಜೋಳ ಅಚ್ಚರಿ ಎಂಬಂತೆ ಲಾಭ ತಂದುಕೊಟ್ಟಿದೆ. ಸಾಮಾನ್ಯವಾಗಿ ಮುಸುಕಿನ ಜೋಳ ಬೆಳೆದ ರೈತರು ಕಾಳಿನತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಈ ಬಾರಿ ಕಥೆ ಸ್ವಲ್ಪ ಬೇರೆನೇ ಆಗಿದೆ. ಮುಸುಕಿನ ಕಾಳಿಗಷ್ಟೇ ಅಲ್ಲ, ಕಡ್ಡಿಗೂ ಉತ್ತಮ ಬೆಲೆ ಸಿಕ್ಕಿರುವುದು ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಎಚ್.ಡಿ. ಕೋಟೆ ಹಾಗೂ ಸರಗೂರು ತಾಲ್ಲೂಕುಗಳಲ್ಲಿ ಈ ವರ್ಷ ಸುಮಾರು 24,500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ ಮಳೆ ಕೊರತೆ, ಬೂಜು ರೋಗ ಹಾಗೂ ಬಿಳಿ ಸುಳಿ ರೋಗದ ಪರಿಣಾಮದಿಂದ ಬಹುತೇಕ ಕಡೆ ಬೆಳೆ ಹಾನಿಗೊಳಗಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಬಿತ್ತನೆ ಮಾಡಿದ ಒಂದು ತಿಂಗಳೊಳಗೆ ರೋಗ ಕಾಣಿಸಿಕೊಂಡ ಪರಿಣಾಮ ಅದೆಷ್ಟು ರೈತರು ಮುಸುಕಿನ ಜೋಳ ಗಿಡವನ್ನು ಕಿತ್ತು ಬೇರೆ ಬೆಳೆ ಬೆಳೆದಿದ್ದಾರೆ. ಇಂತಹ ಪರಿಸ್ಥಿತಿ ನಡುವೆಯೂ ನೀರಾವರಿ ಸೌಲಭ್ಯ ಮತ್ತು ಉತ್ತಮವಾಗಿ ನಿರ್ವಹಣೆ ಮಾಡಿದೆ ಪರಿಣಾಮ ಉತ್ತಮ ಗುಣಮಟ್ಟದ ಮುಸುಕಿನ ಜೋಳದ ಕಡ್ಡಿ ಹುಲುಸಾಗಿ ಬೆಳೆದಿದ್ದು, ಕೇರಳದ ವ್ಯಾಪಾರಿಗಳು ರೈತರ ಜಮೀನುಗಳಿಗೆ ದಾಗಂಡಿ ಇಡುತ್ತಿದ್ದಾರೆ.
ಬಿತ್ತನೆ ಬೀಜ ಮಾಡಿ ಎರಡೂವರೆ ತಿಂಗಳು ಆಗುತ್ತಿದ್ದಂತೆ ಕೇರಳ ವ್ಯಾಪಾರಿಗಳು ರೈತರ ಜಮೀನುಗಳಿಗೆ ಬಂದು ಮುಸುಕಿನ ಜೋಳದ ಕಡ್ಡಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಇಷ್ಟು ವರ್ಷ ಒಂದು ಟನ್ ಗೆ ₹2500-3000 ಸಾವಿರ ಬೆಲೆ ಇತ್ತು. ಆದರೆ ಈ ಬಾರಿ ಟನ್‌ಗೆ ₹4,500ರವರೆಗೆ ಬೆಲೆ ದೊರೆಯುತ್ತಿರುವುದು ರೈತರಲ್ಲಿ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಈ ದರ ಎಲ್ಲ ರೈತರಿಗೆ ದೊರೆಯುತ್ತಿಲ್ಲ. ಬೂಜು ಹಾಗೂ ಬಿಳಿ ಸುಳಿ ರೋಗದಿಂದ ತೀವ್ರ ಹಾನಿಗೊಳಗಾದ ಮತ್ತು ಬೆಳವಣಿಗೆ ಕುಂಠಿತಗೊಂಡ ಜಮೀನುಗಳ ಕಡ್ಡಿಗೆ ಬೇಡಿಕೆ ಕಡಿಮೆಯಿದ್ದು, ಅಂತಹ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಉತ್ತಮ ಬೆಳೆ ಪಡೆದ ಕೆಲ ರೈತರಿಗೆ ಮಾತ್ರ ಹೆಚ್ಚಿನ ಬೆಲೆ ದೊರೆತಿದೆ.
ಕೇರಳದಲ್ಲಿ ಹೆಚ್ಚಿದ ಬೇಡಿಕೆ
ವೈನಾಡು ಹಾಗೂ ಮಾನಂದವಾಡಿ ಭಾಗಗಳಲ್ಲಿ ಹೈನುಗಾರಿಕೆ ಹೆಚ್ಚಿರುವುದರಿಂದ ವರ್ಷದಿಂದ ವರ್ಷಕ್ಕೆ ಹಸಿರು ಮೇವಿನ ಬೇಡಿಕೆಯೂ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಕೇರಳ ವ್ಯಾಪಾರಿಗಳು ಎಚ್.ಡಿ. ಕೋಟೆ ತಾಲ್ಲೂಕಿನ ಗ್ರಾಮಗಳಿಗೆ ಬಂದು ರೈತರ ಹೊಲಗಳಲ್ಲಿಯೇ ಜೋಳದ ಕಡ್ಡಿಯನ್ನು ಖರೀದಿಸಿ ಲಾರಿಗಳ ಮೂಲಕ ಸಾಗಿಸುತ್ತಿದ್ದಾರೆ. ಈ ಬಾರಿ ಮಳೆ ಕೊರತೆ, ಬೂಜು ರೋಗ ಹಾಗೂ ಬಿಳಿ ಸುಳಿ ರೋಗದಿಂದ ಬಹುತೇಕ ರೈತರಿಗೆ ಉತ್ತಮ ಬೆಳೆ ಬಂದಿಲ್ಲ. ಆದರೆ ಉತ್ತಮ ಗುಣಮಟ್ಟದ ಕಡ್ಡಿಗೆ ಟನ್‌ಗೆ ₹4,500ರವರೆಗೆ ಬೆಲೆ ಸಿಕ್ಕಿರುವುದು ಸ್ವಲ್ಪ ನೆಮ್ಮದಿ ತಂದಿದೆ ಎಂದು ಹಿರೇಹಳ್ಳಿ ಭಾಗದ ರೈತರು ತಿಳಿಸಿದ್ದಾರೆ.

