ವಿಜಯಪುರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಓ ರಿಷಿ ಆನಂದ್ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾನವ ಅಭಿವೃದ್ಧಿ ಸೂಚ್ಯಂಕಗಳೇ ಪ್ರಮುಖ ಮಾನದಂಡವಾಗಿದ್ದು, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ತಾಲೂಕುಗಳ ದತ್ತಾಂಶ ಸಂಗ್ರಹ ಸ್ಪಷ್ಟವಾಗಿ ನಿಖರವಾಗಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೨೫ ಹಾಗೂ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆ–೨೦೩೧ ವರದಿಗಳ ತಯಾರಿಕೆ ಕುರಿತ ದತ್ತಾಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರತಿಯೊಂದು ತಾಲೂಕಿನ ಪರಿಸ್ಥಿತಿಯೂ ವಿಭಿನ್ನವಾಗಿದ್ದು, ಕೆಲ ತಾಲೂಕುಗಳು ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಹಾಗೂ ಮೂಲಸೌಲಭ್ಯಗಳಲ್ಲಿ ಕೊರತೆ ಇರಬಹುದು. ಇಂತಹ ದತ್ತಾಂಶಗಳ ಕಡೆಗೆ ಗಮನ ಹರಿಸಬೇಕು ನೀಡುವ ದತ್ತಾಂಶಗಳ ಆಧರಾದ ಮೇಲೆ ಸಮಗ್ರ ವಿಶ್ಲೇಷಣೆ ನಡೆಸಿ ಅಂತಹ ಕ್ಷೇತ್ರಗಳನ್ನು ಗುರುತಿಸಿ ವಿಶೇಷ ಕಾರ್ಯಯೋಜನೆ ರೂಪಿಸಲು ಸಹಾಯವಾಗಲಿದೆ ಎಂದು ಸಿಇಒ ವಿವರಿಸಿದರು.
ಪೌಷ್ಟಿಕ ಆಹಾರ ಹಾಗೂ ಸೂಕ್ತ ಆರೋಗ್ಯ ಸೇವೆ ಒದಗಿಸಲು ಸಂಬಂಧಿಸಿದ ಇಲಾಖೆಗಳು ಸಮನ್ವಯತೆಯಿಂದ ದತ್ತಾಂಶ ಕ್ರೋಡಿಕರಿಸಿ ದಾಖಲಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಇದೇ ವೇಳೆ ಮಾತನಾಡಿದ ಯೋಜನಾ ಇಲಾಖೆಯ ಹಿರಿಯ ನಿರ್ದೇಶಕರು ಬಸವರಾಜ ಎಸ್. ಅವರು, ಎಲ್ಲಾ ಇಲಾಖೆಗಳು ಮಾನವ ಅಭಿವೃದ್ಧಿಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಕಾಲಮಿತಿಯೊಳಗೆ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರೊ. ಡಿ.ಎಂ. ಮದರಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

