ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಸನಾ ಪಿಯು ಕಾಲೇಜಿನ 2026–27ನೇ ಶೈಕ್ಷಣಿಕ ವರ್ಷದ ಒಟ್ಟು 8 ವಿದ್ಯಾರ್ಥಿಗಳು ನೀಟ್ (NEET) ಪರೀಕ್ಷೆಯಲ್ಲಿ ಉತ್ಕೃಷ್ಟ ಅಂಕಗಳನ್ನು ಪಡೆದು ಎಂಬಿಬಿಎಸ್ (MBBS) ವೈದ್ಯಕೀಯ ಕೋರ್ಸ್‌ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಅಥಣಿ ಅಂಜುಮನ್-ಎ-ಇಸ್ಲಾಂ ಸಮಿತಿ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಯಶಸ್ವಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಸ್ಲಿಂ ಮುಖಂಡ ಇನ್ನೂಸ್ ಮುಲ್ಲಾ, “ಕೇವಲ ಕೋಚಿಂಗ್ ತರಗತಿಗಳಾಗಿ ಆರಂಭಗೊಂಡ ಸನಾ ಸಂಸ್ಥೆ, ಇಂದು ಪಿಯು ಕಾಲೇಜಾಗಿ ಅಲ್ಪಾವಧಿಯಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಅಧ್ಯಕ್ಷ ಖಲೀಲ ಬಾಗವಾನ ಹಾಗೂ ಶಿಕ್ಷಕರ ಪರಿಶ್ರಮದ ಫಲವಾಗಿ ಇಂದು ಈ ಸಾಧನೆ ಸಾಧ್ಯವಾಗಿದೆ. ಪ್ರತಿಯೊಬ್ಬ ಪಾಲಕರ ಕನಸು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸುವುದಾಗಿದೆ. ಆ ನಿಟ್ಟಿನಲ್ಲಿ ಸನಾ ಕಾಲೇಜು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಯಾಗಲಿ,” ಎಂದು ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಖಲೀಲ ಬಾಗವಾನ ಮಾತನಾಡಿ, “ನಮ್ಮ ಸಂಸ್ಥೆಯಲ್ಲಿ ಕಲಿತ 8 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಎಂಬಿಬಿಎಸ್‌ಗೆ ಆಯ್ಕೆಯಾಗಿರುವುದು ಸಂಸ್ಥೆಗೆ ಹಾಗೂ ಅವರ ಪಾಲಕರಿಗೆ ಹೆಮ್ಮೆಯ ವಿಷಯವಾಗಿದೆ. ಶಿಕ್ಷಕರು ಎಷ್ಟೇ ಉತ್ತಮವಾಗಿ ಬೋಧಿಸಿದರೂ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಆಸಕ್ತಿ ಇದ್ದಾಗ ಮಾತ್ರ ಯಶಸ್ಸು ಸಾಧ್ಯ. ಈ ವರ್ಷದ ಫಲಿತಾಂಶ ನಮ್ಮೆಲ್ಲರ ಶ್ರಮದ ಪ್ರತಿಫಲವಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳನ್ನು ಅತ್ಯುತ್ತಮ ಸಾಧನೆಗೈಯುವಂತೆ ತಯಾರು ಮಾಡುವ ಗುರಿ ಹೊಂದಿದ್ದೇವೆ. ಈ ಯಶಸ್ಸಿಗೆ ಶಾಲೆಯ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರ ಸಹಕಾರವೇ ಪ್ರಮುಖ ಕಾರಣ,” ಎಂದು ಹೇಳಿದರು.
ನಂತರ ಯಶಸ್ವಿ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು , ಸತ್ಕಾರಕ್ಕಾಗಿ ಅಂಜುಮನ್-ಎ-ಇಸ್ಲಾಂ ಸಮಿತಿ ಮತ್ತು ಸಮಾಜದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಜುಮನ್-ಎ-ಇಸ್ಲಾಂ ಸಮಿತಿಯ ಅಧ್ಯಕ್ಷ ಸಯ್ಯದ ಅಮೀನ್ ಗದ್ಯಾಳ, ಮುಸ್ಲಿಂ ಸಮಾಜದ ಮುಖಂಡರಾದ ಇನ್ನೂಸ್ ಮುಲ್ಲಾ, ಇಲಿಯಾಸ್ ಹಿಪ್ಪರಗಿ, ಅಬ್ದುಲ್ ಅಜೀಜ್ ಮುಲ್ಲಾ, ಹಾಜಿ ಶಫೀಕ್ ಮುಲ್ಲಾ, ಹಾಜಿ ರಿಯಾಜ ಮುಲ್ಲಾ, ಇಮ್ರಾಣ ಪಟಾಯತ, ಅಬೂಬಕರ್ ಕೊಕಟನೂರ, ಡಾ. ಇಸ್ಮಾಯಿಲ್ ಮೊಮಿನ್, ಇರ್ಷಾದ್ ಮನಗೂಳಿ, ನಿಸಾರ್ ಶೇಖ್, ಅಜಹರ್ ಮುಲ್ಲಾ (ಸರ್), ದಾದಾಪೀರ ಜಮಾದಾರ್, ಸಲೀಂ ಮುಲ್ಲಾ, ಸಾಬಿರ್ ಮುಲ್ಲಾ ಸೇರಿದಂತೆ ಶಿಕ್ಷಕ ವೃಂದದವರಾದ ಪ್ರಕಾಶ ಲಗಳಿ, ಗಾಯತ್ರಿ ಕಿವಡಿ, ಜುಬೇರ ಮೋಮಿನ, ಸುಧಾಕರ ತೆಲಗಡೆ ಉಪಸ್ಥಿತರಿದ್ದರು.

