ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶರಣ ಸಾಹಿತ್ಯ ಎಂದು ಅಳಿಯದ ಅಮೂಲ್ಯ ಸಂಪತ್ತು ಅದನ್ನು ಉಳಿಸಲು ಶ್ರಮಿಸಿದವರು, ತಮ್ಮ ಮನೆಯನ್ನು ಮಾರಿ ಪ್ರಿಂಟಿಂಗ್ ಪ್ರೆಸ್ಸನ್ನು ತೆರೆದು, ಊರೂರು ಹಾಗೂ ಮಠಮಾನ್ಯಗಳನ್ನು ಅಲೆದು ತಾಳೆಗರಿಗಳನ್ನು ಹುಡುಕಿಕೊಂಡು ಬಂದು ಶರಣರ ವಚನ ಸಾಹಿತ್ಯವನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಿದವರು ವಚನ ಪಿತಾಮಹ ಡಾ. ಪ ಗು ಹಳಟ್ಟಿಯವರು, ಅವರು ನಿತ್ಯ ಸ್ಮರಣಾರ್ಹರು. ವಿದ್ಯಾರ್ಥಿಗಳು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ ಸಂಸ್ಕಾರಯುತ ಜೀವನವನ್ನು ನಡೆಸಬೇಕು ಎಂದು ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಮದಾಪುರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ದಿ. ಶ್ರೀ ಬಾಳಾಸಾಹೇಬಗೌಡ ಪಾಟೀಲ್ ರವರ ಸ್ಮರಣೆಗಾಗಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮಮದಾಪುರ ವಿರಕ್ತಮಠದ ಪೀಠಾಧ್ಯಕ್ಷ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸಗಳನ್ನು ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಸಮಾಜಕ್ಕೆ ಶರಣರ ಚಿಂತನೆಗಳನ್ನು ತಲುಪಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಉಪಾಧ್ಯಕ್ಷ ಮುತ್ತೇಶ್ ಗಡ್ಡರಮಠ ವಹಿಸಿದ್ದರು.
ವಿಶ್ರಾಂತ ಮುಖ್ಯೋಪಾಧ್ಯಾಯ ಬಸವರಾಜ ಗೋಟ್ಯಾಳ ಅವರು ವಚನ ಪಿತಾಮಹ ಪ. ಗು ಹಳಕಟ್ಟಿಯವರ ಬದುಕು ಬರಹದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಬಬಲೇಶ್ವರ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಲ್ ಪಿ ಬಿರಾದಾರ್, ಬಿ.ಸಿ ಸಾರವಾಡ, ಭೀಮರಾಯ ಅಮಜಗೋಳ, ಮಲ್ಲಪ್ಪ ತೊದಲಬಾಗಿ. ಪ್ರಾಚಾರ್ಯರಾದ ಶ್ರೀಮತಿ ಪಾರ್ವತಿ, ಉಪಪ್ರಾಚಾರ್ಯರಾದ ರಾಘವೇಂದ್ರ ಪುರೋಹಿತ, ಶರಣ ಕರಿಕಲ್ಲ, ರಫೀಕ್ ಭಗವಾನ್, ಮಾರುತಿ ಮಾದರ್ ಸೇರಿದಂತೆ ಅನೇಕ ಗಣ್ಯರು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

