ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬಿ.ಬಿ.ಇಂಗಳಗಿ ಗ್ರಾಮದ ಮುಖ್ಯ ರಸ್ತೆಯಲ್ಲಿನ ವಿದ್ಯುತ್ ಕಂಬ ಮುರಿದು ಬಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಕೂಡಲೇ ಬದಲಾಯಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಕೊಂಡಗೂಳಿ ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ಯಾವುದೇ ವಾಹನ ಡಿಕ್ಕಿಯಾದ ಪರಿಣಾಮ ಕಳೆದ ಐದು ದಿನಗಳಿಂದ ಮುರಿದು ಬಾಗಿದ್ದು ಬೀಳುವ ಸ್ಥಿತಿಯಲ್ಲಿದೆ.
ಈ ಕುರಿತು ಗ್ರಾಮದ ಪಂಚಾಯಿತಿ ನಿಕಟಪೂರ್ವ ಸದಸ್ಯ ಸಲೀಮ್ ವಠಾರ ಮಾತನಾಡಿ, ಇಲ್ಲಿನ ಬೀಳುವ ಸ್ಥಿತಿಯಲ್ಲಿನ ಕಂಬಕ್ಕೆ ಹೆಸ್ಕಾಂ ದೇವರಹಿಪ್ಪರಗಿ ಉಪವಿಭಾಗದ ಕೋರವಾರ ಶಾಖೆಯ ಶಾಖಾಧಿಕಾರಿ ಶರಣಬಸು ಮ್ಯಾಗೇರಿ ಭೇಟಿ ನೀಡಿದ್ದು, ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ವಿಚಾರಿಸಲಾಗಿ ಕಂಬಕ್ಕೆ ಅಪಾಯ ಮಾಡಿದ ವಾಹನದ ಮೇಲೆ ದೂರು ನೀಡಿ ನಂತರ ಕಂಬ ಬದಲಾವಣೆ ಮಾಡಲಾಗುತ್ತದೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ.
ಅಪಾಯ, ಅನಾಹುತ ಯಾರನ್ನು ಕೇಳಿ ಬರುವುದಿಲ್ಲ. ಈಗ ಆಷಾಢ ಮಾಸದಲ್ಲಿ ಗಾಳಿ ಪ್ರಬಲವಾಗಿ ಬೀಸುತ್ತಿದ್ದು ಒಂದು ವೇಳೆ ಹಗಲಿನಲ್ಲಿ ಬಿದ್ದರೇ ಅನಾಹುತ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ರಸ್ತೆಯಲ್ಲಿ ನಿತ್ಯ ಶಾಲಾಮಕ್ಕಳು, ಸಾರ್ವಜನಿಕರು ಸಂಚರಿಸುತ್ತಿದ್ದು ಅಪಾಯ ಆಗುವ ಮೊದಲೇ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅನಾಹುತವೇನಾದರೂ ಆದಲ್ಲಿ ಅದಕ್ಕೆ ಕೋರವಾರ ಶಾಖೆಯ ಶಾಖಾಧಿಕಾರಿಗಳ ನಿರ್ಲಕ್ಷ್ಯ ಕಾರಣ ಎನ್ನಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಹುಸೇನಿ ದೊಡಮನಿ, ಶಿವಣ್ಣ ದಲ್ಲಾಳಿ, ಕುರ್ಬಾನ ದೊಡಮನಿ, ಶಿವರಾಂiÀi ಮಾದರ, ಮೀರಾವಲಿ ದೊಡಮನಿ ಕೂಡಲೇ ಕಂಬ ಬದಲಾವಣೆ ಮಾಡಬೇಕು ಎನ್ನುತ್ತಾರೆ.

