ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ ನೇ ಸಾಲಿನಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೪೭.೫೦ ಕೋಟಿ ರೂ. ಮಂಜೂರಾತಿ ನೀಡಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಪ್ರಮುಖವಾಗಿ, ಮಹಾತ್ಮಾ ಗಾಂಧಿಜೀ ವೃತ್ತ ಅಭಿವೃದ್ಧಿ, ಸರೋವರ (ಕೆರೆ)ಪುನಶ್ಚೇತನ ಕಾಮಗಾರಿ, ನಗರದ ಸಂಚಾರ ಸುವ್ಯವಸ್ಥೆಗೆ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪಗಳ ಅಳವಡಿಕೆ, ನಗರದ ವಿವಿಧ ಭಾಗಗಳಲ್ಲಿ ಸ್ಮಶಾನಗಳ ಅಭಿವೃದ್ಧಿ, ಪ್ರಮುಖ ರಸ್ತೆಗಳಲ್ಲಿ ಯೋಜನಾ ಬದ್ಧವಾಗಿ ಬಸ್ ಶೆಲ್ಟರ್ ಗಳ ನಿರ್ಮಾಣ, ನಗರದ ವಿವಿಧ ಭಾಗಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳು, ೫ ಕೋಟಿ ರೂ. ಮೊತ್ತವನ್ನು ಕೋಟೆ ಗೋಡೆಯ ಸುತ್ತಲೂ ಇರುವ ಕಂದಕ ಅಭಿವೃದ್ಧಿ ಕಾಮಗಾರಿ, ನಗರದ ಕೆಲವು ಭಾಗಗಳಲ್ಲಿ ಮೇಲ್ಮಟ್ಟದ ಜಲ ಸಂಗ್ರಹಗಾರ ಹಾಗೂ ಇತರೆ ಕಾಮಗಾರಿಗಳನ್ನು ಒಳಗೊಂಡು ಅಂದಾಜು ೪೭.೫೦ ಕೋಟಿ ರೂ. ಗಳಲ್ಲಿ ಕಾಮಗಾರಿ ಕೈಕೊಳ್ಳಲು ಮಂಜೂರಾತಿ ನೀಡಿ ನಿಯಮಾನುಸಾರ ಕ್ರಮ ಅನುಸರಿಸಲು ಅಧಿಕಾರಿಗಳಿಗೆ ಸಭೆ ಸೂಚಿಸಿತು.
ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ನಿರ್ದೇಶಕರಾದ ಲಕ್ಷ್ಮಣ ಮೋರೆ, ಸಂಗಪ್ಪ ಯಾದವಾಡ, ದ್ವಿ.ದ.ಸ ಅವರ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ಸಭೆಯಲ್ಲಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠ್ಠಲ ಕಟಕದೊಂಡ, ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿಗಳಾದ ಆನಂದ. ಕೆ, ಪ್ರಾಧಿಕಾರದ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ, ಸದಸ್ಯರಾದ ಸಲೀಮ ಪೀರಜಾದೆ, ಸಂತೋಷ ಪವಾರ, ಮಹಾದೇವ ರಾಠೋಡ, ಕಾಶಿಬಾಯಿ ಹಡಪದ, ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ, ಮಹಾನಗರಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ ಹಾಗೂ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

