ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಬೆಳೆ ಪರಿಹಾರ ವಿತರಿಸಲು ಬಿಜೆಪಿ ಮುಖಂಡರ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕನ್ನು ತಕ್ಷಣವೇ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಮತ್ತು ರೈತರ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಸೋಮವಾರ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುಧ್ಧ ಹರಿಹಾಯ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್.ಎ. ಪಾಟೀಲ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ವೇಗ ನೀಡದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇಂಡಿ ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ಸರ್ಕಾರ ತಕ್ಷಣವೇ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಬೆಳೆ ಪರಿಹಾರ ವಿತರಿಸಬೇಕು ಹಾಗೂ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. ಇಂಡಿ ತಾಲೂಕು ನಿಂಬೆ ಬೆಳೆಗೆ ಜಗತ್ಪ್ರಸಿದ್ಧಿಯಾಗಿದೆ. ಆದರೆ ಇಲ್ಲಿನ ನಿಂಬೆ ಬೆಳೆಗಾರರು ಸೂಕ್ತ ಮಾರುಕಟ್ಟೆ ಮತ್ತು ಸೌಲಭ್ಯಗಳಿಲ್ಲದೆ ನಲುಗುತ್ತಿದ್ದಾರೆ. ನಿಂಬೆ ಅಭಿವೃದ್ಧಿ ನಿಗಮದಿಂದ ಬೆಳೆಗಾರರಿಗೆ ತಕ್ಷಣವೇ ಆರ್ಥಿಕ ಸಹಾಯ ನೀಡಬೇಕು. ನಿಂಬೆ ಹಣ್ಣುಗಳನ್ನು ಸಂರಕ್ಷಿಸಿಡಲು ಆಧುನಿಕ ವೇರ್ಹೌಸ್ (ಉಗ್ರಾಣ) ನಿರ್ಮಾಣ ಮಾಡಬೇಕು ಮತ್ತು ನಿಂಬೆ ಬೆಳೆಯ ವ್ಯಾಪಾರ ಕಡ್ಡಾಯವಾಗಿ ಎಪಿಎಂಸಿ ಮುಖಾಂತರವೇ ನಡೆಯುವಂತಾಗಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಕಾಸೂಗೌಡ ಬಿರಾದರ ಮತ್ತು ಅನಿಲ ಜಮಾದಾರ ಮಾತನಾಡಿ, ಕೃಷ್ಣಾ ನದಿ ಮುಖಾಂತರ ತಾಲೂಕಿನ ಕೆರೆಗಳನ್ನು ತುಂಬಿಸಲು ನೀರು ಹರಿಸುವ ಪ್ರಕ್ರಿಯೆ ಸದ್ಯ ಪ್ರಾರಂಭವಾಗಿದೆ. ಕೆರೆಗಳು ಸಂಪೂರ್ಣವಾಗಿ ತುಂಬಿದ ತಕ್ಷಣವೇ ನಿಲ್ಲಿಸದೇ, ಕಾಲುವೆಗಳ ಮುಖಾಂತರ ರೈತರ ಜಮೀನುಗಳಿಗೂ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ತಲುಪಬೇಕಾದ ವೃದ್ಧಾಪ್ಯ ವೇತನದ ಅನುದಾನವನ್ನು ಸರ್ಕಾರ ಸದ್ಯ ತಡೆಹಿಡಿದಿದೆ. ಇದರಿಂದಾಗಿ ತಾಲೂಕಿನ ನೂರಾರು ವೃದ್ಧರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ತಡೆಹಿಡಿದಿರುವ ವೃದ್ಧಾಪ್ಯ ವೇತನದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಎಲ್ಲ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಅಥವಾ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಬಿಜೆಪಿ ಮುಖಂಡರು ಜಂಟಿಯಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕುಂಬಾರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವು ಬಗಲಿ, ರೈತ ಮೋರ್ಚಾ ಅಧ್ಯಕ್ಷ ಚೆನ್ನಯ್ಯ ಹಿರೇಮಠ, ನಾಗೇಶ ಹೆಗಡ್ಯಾಳ, ವೀರನಗೌಡ ಪಾಟೀಲ, ಸಂತೋಷ ಪಾಟೀಲ, ಬಾಗಪ್ಪ ನಾವಿ ಸೇರಿದಂತೆ ಪಕ್ಷದ ಇನ್ನಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

