ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಲು ಶಾಸಕ ಅನಿಲ್ ಚಿಕ್ಕಮಾದು ಸಲಹೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಇತ್ತೀಚಿನ ದಿನಗಳಲ್ಲಿ ನಮ್ಮ ತಾಲೂಕಿನಲ್ಲಿ ಲಾಟರಿ, ಡ್ರಗ್ಸ್, ಗಾಂಜಾ, ಜೂಜಾಟ ಪ್ರಕರಣಗಳು ಕಡಿಮೆಯಾಗಿವೆ. ಕೇರಳ ಲಾಟರಿ ಸಂಬಂಧ 18 ಜನರ ವಿರುದ್ಧ ಕೇಸ್ ದಾಖಲಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ನಾನು ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎಚ್ ಡಿ ಕೋಟೆ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವಕರು ತಮ್ಮ ಗ್ರಾಮಗಳಲ್ಲಿ ಬೆಳಗ್ಗೆ 5 ಅಥವಾ 6 ಗಂಟೆಗೆ ಎದ್ದು ವ್ಯಾಯಾಮ ಮಾಡಬೇಕು. ವಾಕಿಂಗ್, ಜಾಗಿಂಗ್ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾರನ್ನ ಸ್ನೇಹ ಮಾಡಬೇಕು, ಮಾಡಬಾರದು ಎಂಬುದರ ಅರಿವು ನಿಮಗೆ ಇರಬೇಕು. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಸ್ನೇಹಿತರಿಂದಲೇ ಅದೆಷ್ಟೋ ಮಂದಿ ದಾರಿ ತಪ್ಪುತ್ತಿದ್ದಾರೆ. ಅಡ್ಡದಾರಿ ಹಿಡಿಯುತ್ತಿದ್ದಾರೆ. ಹಣವನ್ನು ಯಾವುದೇ ವಯಸ್ಸಿನಲ್ಲಾದರೂ ಯಾವಾಗಲಾದರೂ ಸಂಪಾದನೆ ಮಾಡಬಹುದು. ಆದರೆ ಆರೋಗ್ಯ ಸಂಪಾದನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯದತ್ತ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಯುವ ಜನರು ಮಾದಕ ವಸ್ತುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.ಯಾವುದೊ ಒಂದು ರೀತಿಯಲ್ಲಿ ಸಂತೋಷ ಸಿಗುತ್ತದೆ. ಮಜಾ ಸಿಗುತ್ತದೆ. ಆ ಕ್ಷಣದಲ್ಲಿ ಎಲ್ಲವನ್ನು ಮೈಮರೆಸುತ್ತೆ ಎಂಬ ಭ್ರಮೆಯಿಂದ ಯುವಪೀಳಿಗೆ ಮಾದಕವ್ಯಸನಿಗಳುತ್ತಾರೆ. ದಯವಿಟ್ಟು ಈ ಒಂದು ಡ್ರಗ್ಸ್ ಚಟದಿಂದ ಹೊರಬಂದು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕಿವಿ ಮಾತು ಹೇಳಿದರು.
ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಜಾಥಾ
ಶ್ರೀ ವಿಶ್ವಭಾರತಿ ಕಾಲೇಜಿನಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನವರೆಗೂ ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಜಾಥಾ ನಡೆಯಿತು. ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ನಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಭಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ವಿಶ್ವಭಾರತಿ ಕಾಲೇಜು ಪ್ರಾಂಶುಪಾಲರಾದ ಕುಮಾರಸ್ವಾಮಿ, ಪೊಲೀಸ್ ಸಹಾಯಕ ಇನ್ಸ್ಪೆಕ್ಟರ್ ಗಳಾದ ಚಂದ್ರಕಾಂತ ನಾಯಕ, ಚಿಕ್ಕನಾಯಕ, ಸುರೇಶ್ ನಾಯಕ, ಸುನಿಲ್ ಗೌಡ , ಆರಕ್ಷಕ ಸಿಬ್ಬಂದಿಗಳಾದ ಸಯ್ಯದ್ ಕಬೀರ್ ಉದ್ದಿನ್, ಮಹೇಶ್, ಉಮೇಶ್, ಮೋಹನ್ , ಪ್ರಾಂಶುಪಾಲರಾದ ಅರಸು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು, ಇನ್ನಿತರರು ಉಪಸ್ಥಿತರಿದ್ದರು.

