ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳು ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಅತ್ಯಂತ ಹೆಚ್ಚು ಬಾಧಿತವಾಗಿರುವ ಜಿಲ್ಲೆಗಳಾಗಿದ್ದು, ಈ ಭಾಗದ ಸಂತ್ರಸ್ತರು ಹಲವು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ, (ಪ್ರವೀಣ ಶೆಟ್ಟಿ ಬಣ) ಕೊಲ್ಹಾರ ತಾಲೂಕ ಘಟಕದ ವತಿಯಿಂದ ರವಿ ಗೊಳಸಂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಜಲ ಸಂಪನ್ಮೂಲ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮುಂಚಿತವಾಗಿ ಮಾಹಿತಿ ನೀಡದೆ ಏಕಾಏಕಿ ಬಂದು ಹೋಗುತ್ತಿರುವುದು ಸರಿಯಾದ ಕ್ರಮವಲ್ಲ. ಸರ್ಕಾರವು ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ನೀಡುವುದು ತನ್ನ ಪ್ರಮುಖ ಕರ್ತವ್ಯವಾಗಿದ್ದು, ಈ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಬಾಗಲಕೋಟೆ ಮತ್ತು ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಚೇರಿಗಳು ಇದ್ದು, ಜನರ ಅಹವಾಲುಗಳನ್ನು ಸ್ವೀಕರಿಸಲು ನಿಗದಿತ ಸಮಯವನ್ನು ಘೋಷಿಸಿ ಮುಂಚಿತವಾಗಿ ಪತ್ರಿಕಾ ಪ್ರಕಟಣೆ ನೀಡಬೇಕು. ಇದರಿಂದ ಸಂತ್ರಸ್ತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧಿಕಾರಿಗಳು ಮುಂಚಿತ ಮಾಹಿತಿ ನೀಡದೆ ಭೇಟಿ ನೀಡಿ ಹಿಂತಿರುಗುವುದರಿಂದ ಜನರ ಸಮಸ್ಯೆಗಳು ಅಲಕ್ಷ್ಯವಾಗುತ್ತಿವೆ. ಈ ರೀತಿಯ ನಿರ್ಲಕ್ಷ್ಯ ಧೋರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ರವಿ ಗೊಳಸಂಗಿ ತಿಳಿಸಿದ್ದಾರೆ.

