ಬೆಳಗಾವಿಯಲ್ಲಿ ನಡೆದ ಅನುಭಾವ ಗೋಷ್ಠಿಯಲ್ಲಿ ಸಾಹಿತಿ ಪ್ರೋ.ಜಯಶ್ರೀ ಅಬ್ಬಿಗೇರಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬೆಳಗಾವಿ: ‘12ನೇ ಶತಮಾನದ ಶರಣರ ವಚನಗಳು ಸಮಾಜಕ್ಕೆ ನೈತಿಕ ಶಿಕ್ಷಣ ನೀಡುತ್ತವೆ. ಮನದ ಕಲ್ಮಶವನ್ನು ನಿವಾರಿಸಿ ಜ್ಞಾನವನ್ನು ಹರಡುವಲ್ಲಿ ವಚನಗಳ ಕೊಡುಗೆ ಅನನ್ಯವಾಗಿದೆ’ ಎಂದು ಸಾಹಿತ್ಯ ಪ್ರೋ. ಜಯಶ್ರೀ ಅಬ್ಬಿಗೇರಿ ಹೇಳಿದರು.
ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಮ್ಮಿಕೊಂಡಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಪರಿಕಲ್ಪನೆ’ ವಿಷಯ ಕುರಿತು ಅವರು ಮಾತನಾಡಿದರು.
‘ಶರಣರ ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ. ಅತ್ಯಂತ ಸರಳವಾಗಿ ಬದುಕಿನ ಸೂತ್ರಗಳನ್ನು ಸೂತ್ರೀಕರಿಸಿದವರು ಶರಣರು. ಬಸವಣ್ಣನವರ “ಕಳಬೇಡ ಕೊಲಬೇಡ..” ಎಂಬ ವಚನವು ಮಾನವನ ಸುಂದರ ಬದುಕಿಗೆ ಬಹು ದೊಡ್ಡ ವ್ಯಾಖ್ಯಾನವಾಗಿದೆ. ನಮ್ಮ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗೆ ಇನ್ನೇನು ಬೇಕು ಎಂದರು.
ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಹಾದೇವಿ ಪಾಟೀಲ ವಚನ ಪ್ರಾರ್ಥನೆ ಮಾಡಿದರು. ಸೋಮಲಿಂಗ ಮಾವಿನಕಟ್ಟಿ, ಪಾರ್ವತಿ ತುಪ್ಪದ ಪರಿಚಯಿಸಿದರು. ಸವಿತಾ ವಿರುಪಾಕ್ಷಿ ವಚನ ವಿಶ್ಲೇಷಣೆ ಮಾಡಿದರು. ಮಹಾದೇವಿ ಅಜಿವಾನ ನಿರೂಪಿಸಿದರು. ಆರ್.ಪಿ. ಪಾಟೀಲ ವಂದಿಸಿದರು. ಎ.ಬಿ.ಮಡಿವಾಳರ ದಾಸೋಹ ಸೇವೆಗೈದರು.

“ಒತ್ತಡದ ಬದುಕಿನಲ್ಲಿ ನಡೆಯುತ್ತಿರುವ ನಾವು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ. ಸಂಯಮವನ್ನು ಕಳೆದುಕೊಂಡು ಬದುಕುವಂತಾಗಿರುವ ಈ ಸಮಯದಲ್ಲಿ ಸಮಾಧಾನ, ವ್ರವಧಾನ, ಅವಧಾನಗಳನ್ನು ಅತ್ಯಂತ ಮಾರ್ಮಿಕವಾಗಿ ಶರಣರು ತಿಳಿಸಿಕೊಟ್ಟಿದ್ದಾರೆ. ಅವರು ಹೇಳಿರುವ ಕಾಯಕ ದಾಸೋಹ, ಪ್ರಸಾದ ಸೂತ್ರಗಳು ನಮ್ಮ ಜೀವನಕ್ಕೆ ಅಡಿಪಾಯವಾಗಿವೆ. ಕರ್ಮ ಸಿದ್ಧಾಂತದ ಕುರಿತು ಅವರು ಹೇಳಿರುವ ರೀತಿ ನಮ್ಮ ಜೀವನಕ್ಕೆ ಸೋಪಾನವಾಗಿದೆ. ವಚನಗಳನ್ನು ಅಭ್ಯಸಿಸಿ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು.”
– ಜಯಶ್ರೀ ಅಬ್ಬಿಗೇರಿ
ಸಾಹಿತಿ & ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ

