ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ದಪ್ಪ ಹೂಗಾರ
ಆಲಮಟ್ಟಿ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಅರಳದಿನ್ನಿ ಗ್ರಾಮದ ಗ್ರಾಮಸ್ಥರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ಚಂದ್ರಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ, ಸಾಂಪ್ರದಾಯಿಕ ಗುರ್ಜಿ ಸೇವೆಯ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತು.
ಶುಕ್ರವಾರ ಬೆಳಿಗ್ಗೆ ಗ್ರಾಮದ ಮಹಿಳೆಯರು ಹಾಗೂ ಹಿರಿಯರು ದೇವಸ್ಥಾನದಲ್ಲಿ ಒಟ್ಟುಗೂಡಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತಿ ಪೂರ್ವಕವಾಗಿ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಮಹಿಳೆಯರು ತಲೆಯ ಮೇಲೆ ಗುರ್ಜಿ ಹೊತ್ತು, ಮನೆ ಮನೆಗೆ ಭೇಟಿ ನೀಡಿದರು. ಮನೆಗಳ ಮುಂದೆ ನೀರು ಹಾಕಿಸಿಕೊಂಡು, ಭಕ್ತಿಗೀತೆಗಳು ಮತ್ತು ಸಾಂಪ್ರದಾಯಿಕ ಪದಗಳನ್ನು ಹಾಡುತ್ತಾ ಮಳೆಗಾಗಿ ಬೇಡಿಕೊಂಡರು.
ಮೆರವಣಿಗೆಯ ಸಂದರ್ಭದಲ್ಲಿ ಗ್ರಾಮಸ್ಥರಿಂದ ರೊಟ್ಟಿ, ಅಕ್ಕಿ, ಬೇಳೆ ಮತ್ತು ದುಡ್ಡನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಸಾಮಗ್ರಿಗಳಿಂದ ಇಡೀ ಊರಿಗೆ ಸಾಮೂಹಿಕವಾಗಿ ಪ್ರಸಾದವನ್ನು ತಯಾರಿಸಿ ಗ್ರಾಮ ದೇವತೆಯಾದ ಕೊಣಮ್ಮದೇವಿ ದೇವಸ್ಥಾನದಲ್ಲಿ ವಿತರಿಸಲಾಯಿತು.
“ಮಳೆ ಬಾರದೆ ಬೆಳೆಗಳು ಒಣಗುತ್ತಿವೆ. ದೇವರಲ್ಲಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಈ ಗುರ್ಜಿ ಸೇವೆಯನ್ನು ಮಾಡಿದ್ದೇವೆ” ಎಂದು ಧರ್ಮರ ಮಠದ ಧರ್ಮಾಧಿಕಾರಿ ಚಂದ್ರಶೇಖರ ಧರ್ಮರ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಮಹಿಳೆಯರು, ಯುವಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಈ ಗುರ್ಜಿ ಸೇವೆಯಲ್ಲಿ ಗ್ರಾಮದ ಮಹಿಳೆಯರಾದ ಯಮನವ್ವ ಕೊಳ್ಳಾರ, ಮಾದೇವಿ ಹಿರೇಮಠ,ಸೊನವ್ವ ಭಜಂತ್ರಿ, ಸುವರ್ಣ ಹಿರೇಮಠ, ಸೊಮವ್ವ ಕೊಳ್ಳಾರ, ರಾಮಲಿಂಗವ್ವ ಧರ್ಮರ,ಸುನೀತಾ ಪವಾರ, ಸಿವಲಿಂಗವ್ವ ಭಾವಿಕಟ್ಟಿ, ಯಲ್ಲವ್ವ ಮಾದರ, ಸಿನಿಂಗವ್ವ ಮಾದರ, ಮುತ್ತವ್ವ ಮಾದರ ಮತ್ತಿತರರು ಇದ್ದರು.
ಗ್ರಾಮದಲ್ಲಿ ಹಬ್ಬದ ವಾತಾವರಣ
ಅರಳದಿನ್ನಿ ಗ್ರಾಮದ ದೇವಸ್ಥಾನದ ಆವರಣದಲ್ಲಿ ಹಾಗೂ ಮೆರವಣಿಗೆ ನಡೆದ ಗ್ರಾಮದ ಬೀದಿಗಳಲ್ಲಿ ಹಬ್ಬದ ವಾತಾವರಣ ಕೂಡಿತ್ತು. ಈ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಗುರ್ಜಿ ಸೇವೆಯಿಂದ ಗ್ರಾಮದಲ್ಲಿ ಉತ್ತಮ ಮಳೆಯಾಗಿ ಬೆಳೆಗಳು ಚೆನ್ನಾಗಿ ಬರಲಿ ಎಂದು ಎಲ್ಲ ಗ್ರಾಮಸ್ಥರು ದೇವರಲ್ಲಿ ಮೊರೆ ಇಟ್ಟಿದ್ದಾರೆ.

