ಬರಪರಿಹಾರ ಕುರಿತು ಕೇಂದ್ರಕ್ಕೆ ಪತ್ರ ಬರೆಯುತ್ತಿರುವ ರಾಜ್ಯದ ವಿರುದ್ಧ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಎದುರಾಗಿದ್ದು ಬರಘೋಷಣೆಯಾಗದೆ, ಸಮೀಕ್ಷೆ ನಡೆಸದೇ, ಪ್ರಸ್ತಾವನೆ ಸಲ್ಲಿಸದೇ ಪರಿಹಾರಕ್ಕಾಗಿ ನಿರಂತರವಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರ ವಿರುದ್ಧ ಸಂಸದ ರಮೇಶ ಜಿಗಜಿಣಗಿ ಹರಿಹಾಯ್ದಿದ್ದಾರೆ.
“ಬರಪರಿಹಾರಕ್ಕಾಗಿ ಈಗ ಕೇಂದ್ರಕ್ಕೆ ಪತ್ರ ಬರೆಯುವ ಕುರಿತು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು, ಮೊದಲು ತಮ್ಮ ಜವಾಬ್ದಾರಿ ಏನು ಅಂತ ಯೋಚಿಸಬೇಕು. ಎಲ್ಲದಕ್ಕೂ ಕೇಂದ್ರವೇ ಮಾಡಬೇಕು ಅಂದ್ರೆ ರಾಜ್ಯ ಸರ್ಕಾರದ ಪಾತ್ರವೇನು?” ಎಂದು ಪ್ರಶ್ನಿಸಿದ್ದಾರೆ.
“NDRF ಮಾರ್ಗಸೂಚಿ ಪ್ರಕಾರ ರಾಜ್ಯ ತನ್ನ SDRF ನಿಧಿಯಿಂದ ಮೊದಲು ಪರಿಹಾರ ನೀಡಬೇಕು. ನಂತರ ಕೇಂದ್ರದಿಂದ ಹೆಚ್ಚುವರಿ ನೆರವು ಕೇಳಬೇಕು. ಆದರೆ ಇಲ್ಲಿ ರಾಜ್ಯ ಸರ್ಕಾರ ಯಾವುದೇ ಕೆಲಸ ಮಾಡದೇ ನೇರವಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತಿದೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸ” ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ಬರ ಘೋಷಿಸಿ, ರೈತರಿಗೆ ತಕ್ಷಣದ ಪರಿಹಾರ ಘೋಷಿಸಬೇಕು ಎಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ರೈತರ ಪರವಾಗಿ ಒತ್ತಡ ಹೇರುತ್ತೇನೆ
ಕೇಂದ್ರ ಸರ್ಕಾರವು ಬರಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ರಾಜ್ಯ ಸರ್ಕಾರ ಸರಿಯಾದ ಪ್ರಸ್ತಾವನೆ ಮತ್ತು ಅಂಕಿ-ಅಂಶಗಳೊಂದಿಗೆ ಬೇಡಿಕೆ ಸಲ್ಲಿಸಿದರೆ ಕೇಂದ್ರ ತಕ್ಷಣ ಸ್ಪಂದಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಫಲ, ಕೇಂದ್ರದ ಮೇಲೆ ಗೂಬೆ
ಬರ ಪರಿಸ್ಥಿತಿ ನಿಭಾಯಿಸುವುದು, ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವುದು ಮತ್ತು ರೈತರಿಗೆ ತಕ್ಷಣದ ನೆರವು ನೀಡುವುದು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿ. ಆದರೆ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರತಿ ಬಾರಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಂಸದ ಜಿಗಜಿಣಗಿ ಆರೋಪಿಸಿದ್ದಾರೆ.

