ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣ ಪಂಚಾಯತಿ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಸದಸ್ಯ ಸಾಧಿಕ ಫರಿದಾಸಬ ಸುಂಬಡ ಅವರನ್ನು ಅಧ್ಯಕ್ಷ ಸ್ಥಾನದ ಅವಿಶ್ವಾಸ ನಿಲುವಳಿ ಮಂಡಿಸಲು ೧೨ ಸದಸ್ಯರು ಸಹಿ ಮಾಡಿ ಮುಖ್ಯಾಧಿಕಾರಿ ರವಿ ಸಿರಗುಪ್ಪಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಒಟ್ಟು ೧೯ ಸಂಖ್ಯಾಬಲದ ಸದಸ್ಯರನ್ನು ಹೊಂದಿರುವ ಆಲಮೇಲ ಪಟ್ಟಣ ಪಂಚಾಯತಿ ಜಿಲ್ಲೆಯಲ್ಲಿಯೇ ದೊಡ್ಡ ಪಟ್ಟಣಪಂಚಾಯತಿ ಆಗಿದೆ , ೧೦ ಸದಸ್ಯರು ಬೆಂಬಲ ಬೇಕಿರುವ ಈಗಿನ ಅಧ್ಯಕ್ಷರಿಗೆ ೧೨ ಸದಸ್ಯರು ಬೆಂಬಲ ಹಿಂಪಡೆದುಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಿಂದ ತಲಾ ಎಂಟು ಸದಸ್ಯರು ಚುನಾಯಿತರಾಗಿದ್ದು ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ಈಗ ಅವಿಶ್ವಾಸ ನಿಲುವಳಿ ಸಭೆ ನಡೆಸುವಂತೆ ಆಗ್ರಹಿಸಿದ. ಅಧ್ಯಕ್ಷ ಸಾದಿಕ ಸುಂಬಡ ಅವಧಿಯಲ್ಲಿನ ಅಕ್ರಮಗಳ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಸಂಜೀವಕುಮಾರ ಯಂಟಮಾನ ‘ ಅಧ್ಯಕ್ಷರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ, ಸದಸ್ಯರ ಗಮನಕ್ಕೂ ತರದೆ ತೀರ್ಮಾನ ಮಾಡುತ್ತಿದ್ದು, ಸರಿಯಾದ ಕ್ರಮವಲ್ಲ , ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ ತೆರಿಗೆ, ತರಕಾರಿ ಮಾರುಕಟ್ಟೆಯ ಲಿಲಾವಿನಿಂದ ಬಂದ ಲಕ್ಷಂತರ ವಿವಿಧ ಮೂಲಗಳಿಂದ ಬಂದ ಹಣದ ಸಂಗ್ರಹದ ಕುರಿತು ಮಾಹಿತಿ ನೀಡದೇ ಅಕ್ರಮವಾಗಿ ಬಳಸಿರುವ ಮಾಹಿತಿ ಇದೆ, ಅದರ ಕುರಿತು ಸಮಗ್ರ ತನಿಖೆ ಆಗಬೇಕು ಹಾಗೂ ಅವಿಶ್ವಾಸ ಸಭೆ ನಡೆಯುವವರೆಗೂ ಯಾವುದೆ ಆರ್ಥಿಕ ಅನುಮೋದನೆ ಮಾಡುವದಾಗಲಿ ಮಾಡಲಿಕ್ಕೆ ಅವಕಾಶ ನೀಡಬಾರದು, ದುರ್ಬಳಕೆಯಾಗದಂತೆ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪಕ್ಷದ ಸದಸ್ಯರಾದ ಸಂಜಯಕುಮಾರ ಯಂಟಮನ ಮತ್ತು ಪಕ್ಷೇತರ ಸದಸ್ಯ ಉಮರ್ ಬಿಳವಾರ ನೇತೃತ್ವದಲ್ಲಿ ಉಪಾಧ್ಯಕ್ಷೆ ಸುಮಾ ಕತ್ತಿ, ಸದಸ್ಯರಾದ ಚಂದ್ರಕಾಂತ ಕಾಂಬಳೆ, ಚಂದ್ರಶೇಖರ ಹಳೆಮನಿ, ಜುಬೇದಾಬೇಗಂ ಸುಂಬಡ, ಹಣಮಂತ ಹೂಗಾರ, ರೇಣುಕಾ ಭೋವಿ, ಬಿಸ್ಮಿಲ್ಲಾ ಮಸಳಿ ಹಾಗೂ ಕಾಂಗ್ರೆಸ್ ಪಕ್ಷದ ಅಶೋಕ ಕೊಳಾರಿ, ವಿಜಯಲಕ್ಷ್ಮಿ ಜರಕರ, ಯಲ್ಲಮ್ಮ ನಾಯ್ಕೋಡಿ ಸೇರಿದಂತೆ ೧೨ ಜನ ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿ ಮುಖ್ಯಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
“ಆಲಮೇಲ ಪಟ್ಟಣ ಪಂಚಾಯತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಕಂಡುಬಂದಿದೆ, ಈ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಕೊಳ್ಳಬೇಕು.”
– ಸಂಜೀವಕುಮಾರ ಯಂಟಮಾನ
ಪಪಂ ಸದಸ್ಯರು
