ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಸರಕಾರ ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ.ಅವರು ತಿಳಿಸಿದ್ದಾರೆ.
ತಾಲ್ಲೂಕುವಾರು ಹಾಗೂ ಗ್ರಾಮ ಪಂಚಾಯಿತಿವಾರು ಅಧಿಸೂಚಿಸಲಾಗಿರುವ ವಿವಿಧ ಬೆಳೆಗಳ ವಿಮಾ ಮೊತ್ತ, ವಿಮಾ ಕಂತು ಮತ್ತು ನೋಂದಣಿಯ ಅಂತಿಮ ದಿನಾಂಕದ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಕಚೇರಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.
ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ, ಬೆಳೆ ಸಾಲ ಪಡೆದ ರೈತರು, ಸಾಲ ನೀಡಿದ ಬ್ಯಾಂಕ್ ಗಳಲ್ಲಿ ವಿಮೆ ನೋಂದಾಯಿಸಬೇಕು. ಜೊತೆಗೆ ಬೆಳೆ ಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿ ಜೊತೆ ಕೃಷಿ ಸಾಲ ಪಡೆಯದಿರುವ ಕುರಿತು ಕಡ್ಡಾಯವಾಗಿ ಸ್ವಯಂ ಘೋಷಣೆ ಪತ್ರ ಲಗತ್ತಿಸಬೇಕು.
ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಸಂಖ್ಯೆಯೊಂದಿಗೆ ಡಿಸಿಸಿ/ಇತರೆ ಬ್ಯಾಂಕ, ಗ್ರಾಮ್ ಓನ್ ಮತ್ತು ಸಿ.ಎಸ್.ಸಿ ಕೇಂದ್ರಳಿಗೆ ಸಂಪರ್ಕಿಸಬಬಹುದಾಗಿದೆ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳು (ತೊಗರಿ ಮಳೆಯಾಶ್ರಿತ), ತೊಗರಿ (ನೀರಾವರಿ), ಮುಸುಕಿನ ಜೋಳ (ನೀರಾವರಿ),ಸಜ್ಜೆ (ಮಳೆಯಾಶ್ರಿತ) ವಿಮಾ ಕಂತನ್ನು ಜು.೩೧ ರೊಳಗಾಗಿ ಪಾವತಿಸಬೇಕು ಎಂದವರು ತಿಳಿಸಿದ್ದಾರೆ.
ಹೋಬಳಿ ಮಟ್ಟಕ್ಕೆ ಬೆಳೆಗಳು: ಈರುಳ್ಳಿ (ನೀರು) ಹಾಗೂ ಹತ್ತಿ (ಮಳೆ ಆಶ್ರಿತ) ಬೆಳೆಗಳಿಗೆ ವಿಮೆ ಕಂತನ್ನು ಆಗಸ್ಟ್ ೧೪ ರೊಳಗಾಗಿ ತುಂಬಬಹುದಾದರೆ, ಇನ್ನುಳಿದ ಬೆಳೆಗಳಿಗೆ ಜು.೩೧ ರೊಳಗಾಗಿ ವಿಮಾ ಕಂತು ತುಂಬಬೇಕು ಎಂದು ತಿಳಿಸಿದ್ದಾರೆ. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಎಫ್ ಐಡಿ ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

