ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರ (ಐ.ಸಿ.ಟಿ.ಸಿ.) ಅನ್ನು ತಕ್ಷಣ ಮರುಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ರವಿ ಗೊಳಸಂಗಿ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಅವರ ಮುಖಾಂತರ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೊಲ್ಹಾರ ಹೊಸ ತಾಲೂಕು ಕೇಂದ್ರವಾಗಿದ್ದು, ರೋಣಿಹಾಳ, ತೆಲಗಿ, ಕೂಡಗಿ, ಮುಳವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಆರೋಗ್ಯ ಸೇವೆಗಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐ.ಸಿ.ಟಿ.ಸಿ. ಕೇಂದ್ರದ ಮೂಲಕ ಎಚ್‌ಐವಿ ಪರೀಕ್ಷೆ, ಆಪ್ತ ಸಮಾಲೋಚನೆ ಹಾಗೂ ಜಾಗೃತಿ ಸೇವೆಗಳು ಪರಿಣಾಮಕಾರಿಯಾಗಿ ದೊರೆಯುತ್ತಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಯಾವುದೇ ಸಮರ್ಪಕ ಕಾರಣವಿಲ್ಲದೆ ಐ.ಸಿ.ಟಿ.ಸಿ. ಕೇಂದ್ರವನ್ನು ಸ್ಥಗಿತಗೊಳಿಸಿರುವುದರಿಂದ ಸುಮಾರು 28 ರಿಂದ 30 ಸಾವಿರ ಜನಸಂಖ್ಯೆ ಹೊಂದಿರುವ ಕೊಲ್ಹಾರ ತಾಲೂಕಿನ ಜನರು ಅಗತ್ಯ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಎಚ್‌ಐವಿ ಕುರಿತು ಜಾಗೃತಿ ಮೂಡಿಸುವುದು, ಸಮಯೋಚಿತ ಪರೀಕ್ಷೆ ನಡೆಸುವುದು ಹಾಗೂ ಸೋಂಕಿತರನ್ನು ಚಿಕಿತ್ಸೆಗೆ ಸಂಪರ್ಕಿಸುವ ಮಹತ್ವದ ಸೇವೆಗಳು ಸ್ಥಗಿತಗೊಂಡಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಸಿಬ್ಬಂದಿ ಕೊರತೆಯೂ ಇದೆ. ಇಂತಹ ಸಂದರ್ಭದಲ್ಲಿ ಐ.ಸಿ.ಟಿ.ಸಿ. ಕೇಂದ್ರವನ್ನು ಮುಚ್ಚಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಸಮಂಜಸವಲ್ಲ. ಬಸವನ ಬಾಗೇವಾಡಿ ಹಾಗೂ ನಿಡಗುಂದಿಯಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವಾಗ ಕೊಲ್ಹಾರದಲ್ಲಿ ಮಾತ್ರ ಸ್ಥಗಿತಗೊಳಿಸಿರುವುದು ಜನರಿಗೆ ತೊಂದರೆ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಕೊಲ್ಹಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರವನ್ನು ಕೂಡಲೇ ಮರುಸ್ಥಾಪಿಸಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ ಸಾರವಾಡ, ಶಂಕ್ರಪ್ಪ ಗೊಳಸಂಗಿ , ಸುನೀಲ ಕೋರಿ, ಶಿವು ವಾಲಿಕಾರ, ಈರಣ್ಣ ಬಿರಾದಾರ, ಶಿವನಗೌಡ ಬಿರಾದಾರ, ಸುಧಾಕರ ದಳವಾಯಿ ಇತರರು ಇದ್ದರು

