ವಿದ್ಯಾರ್ಥಿ ನಿಧಿ
- ಮಂಡ್ಯ ಮ.ನಾ.ಉಡುಪ
ರಾಮಾಪುರವೆಂಬ ಊರಿನ ಮಧ್ಯೆ ಭಾಗದಲ್ಲಿ ವಿಶಾಲವಾಗುವಂತಹ ಮಾವಿನಮರ ಬೆಳೆದಿತ್ತು. ಆ ಮರದ ಕೆಳಗೆ ಆ ಊರಿನ ಗ್ರಾಮಸ್ಥರು ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅಕ್ಕಪಕ್ಕದ ಊರುಗಳಿಗೆ ಹೋಗುವಂತಹ ಗ್ರಾಮಸ್ಥರು ಮಾರ್ಗಯಾಸ ಪರಿಹಾರ ಮಾಡಿಕೊಳ್ಳಲು ಇದೇ ಮರದ ಕೆಳಗೆ ಕೆಲಕಾಲತಂಗಿ ಮುಂದೆ ಹೋಗುತ್ತಿದ್ದರು. ಹೀಗೆ ಈ ವಿಶಾಲವಾದಂತಹ ಮಾವಿನಮರ ನೂರಾರು ಪಕ್ಷಿಗಳಿಗೆ ಜಾನುವಾರುಗಳಿಗೆ, ಜನರಿಗೆ ಆಶ್ರಯ ತಾಣವಾಗಿ ನಿಂತಿತ್ತು. ಹೀಗಿರಲು ಒಂದು ದಿನ ಆ ಮರದ ಕೆಳಗಿನ ಹುತ್ತದೊಳಗೆ ದೂರದ ಕಾಡಿನಿಂದ ಬಂದಂತಹ ಕರಿನಾಗರ ಆಶ್ರಯ ಪಡೆದಿತ್ತು. ಹೀಗೆ ಸೇರಿಕೊಂಡ ಹಾವು ಆ ಮರದ ಕೆಳಗೆ ವಿಶ್ರಾಂತಿ ಪಡೆಯಲು ಬರುತ್ತಿದ್ದ ಜನರಿಗೆ ಕಚ್ಚಿ ಉಪಟಳ ಕೊಡುತ್ತಿತ್ತು. ಹೀಗೆ ಕಚ್ಚಿ ಹಲವಷ್ಟು ಜನ ಪ್ರಾಣವನ್ನೇ ಕಳೆದುಕೊಂಡಿದ್ದರು . ಹೀಗಾಗಿ ಮಾವಿನ ಮರದ ಕೆಳಗೆ ಹೋಗಲು ಜನ ಭಯಪಡಬೇಕಾದಂತಹ ವಾತಾವರಣ ನಿರ್ಮಾಣವಾಯಿತು. ಈ ಹಾವಿನ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಆ ಮರದ ಹತ್ತಿರ ಬರುವುದನ್ನು ನಿಲ್ಲಿಸಿಬಿಟ್ಟರು.
ಕಾಲ ಕಳೆಯುತ್ತಿರಲು ಒಂದು ದಿನ ಆ ಮರದ ಕೆಳಗೆ ಒಬ್ಬ ಸನ್ಯಾಸಿ ಹೋಗುತ್ತಿದ್ದ. ಬಹಳ ಕಾಲದಿಂದ ಮನುಷ್ಯರ ಓಡಾಟವೇ ನಿಂತಿದ್ದ ಆ ದಾರಿಯಲ್ಲಿ ಬರುತ್ತಿರುವಂತಹ ಸನ್ಯಾಸಿಯ ಬಳಿಗೆ ಹಾವು ಸರಸರನೆ ಹೋಯಿತು. ಸನ್ಯಾಸಿ ತನ್ನ ತಪಶಕ್ತಿಯಿಂದ ಹಾವನ್ನು ಅಲ್ಲಿಯೇ ನಿಲ್ಲುವಂತೆ ಮಾಡಿದ. ಅವನ ದೃಷ್ಟಿ ಬಿದ್ದಂತಹ ಹಾವು ತನ್ನ ಮೂಲ ದುಷ್ಟಗುಣಗಳನ್ನು ತ್ಯಜಿಸಿತು.
“ವಿನಾ ಕಾರಣ ಯಾರಿಗೂ ತೊಂದರೆ ಕೊಡಬೇಡ” ಎನ್ನುವಂಥ ಉಪದೇಶವನ್ನು ನೀಡಿ ಸನ್ಯಾಸಿ ಹೊರಟು ಹೋದ.
ಹೀಗಿರಲು ಹಲವಾರು ದಿನ ಹಾವು ಹುತ್ತದಿಂದ ಬರದೇ ಇರುವುದನ್ನು ನೋಡಿದಂತಹ ಆ ಊರಿನ ದನಗಾಹಿಗಳು ಹಾವು ಸತ್ತೇ ಹೋಗಿರಬೇಕೆಂದು ತಿಳಿದು ಮತ್ತೆ ಮರದ ಕಡೆ ಬರಲು ಆರಂಭಿಸಿದರು. ಅವರು ಆ ಮರದ ಕಡೆ ನಿತ್ಯವೂ ಬಂದು ಕೂರುವುದು. ಆಟ ಆಡುವುದು ಮತ್ತೆ ಮಾಮೂಲಿನಂತೆ ನಡೆಯತೊಡಗಿತು. ಹಾವು ಯಥಾಪ್ರಕಾರ ಹೊರಗೆ ಬಂದರೂ ಯಾರಿಗೂ ಕಚ್ಚದೇ ಯಾರಿಗೂ ನೋವು ಕೊಡದೇ ಅಲ್ಲಿಲ್ಲಿ ಓಡಾಡಿ ಬಿಲ ಸೇರುತ್ತಿತ್ತು.
ಹೀಗೆ ಹಲವು ದಿನ ಕಳೆದರೂ ಆ ಹಾವು ಯಾರಿಗೂ ಏನೂ ಮಾಡದೇ ಅಲ್ಲಲ್ಲಿ ಓಡಾಡುತ್ತಿರುವುದನ್ನು ನೋಡಿದಂತಹ ಈ ದನಗಾಹಿಗಳು ಹಾವನ್ನು ಹಿಡಿದು ಆಡಿಸುವುದು, ಕತ್ತಿಗೆ ಸುತ್ತಿಕೊಳ್ಳುವುದು, ಕಲ್ಲು ಹೊಡೆಯುವುದು ಹೀಗೆ ನಾನಾ ರೀತಿಯ ಹಿಂಸೆ ಕೊಡಲು ಆರಂಭಿಸಿದರು. ಆದರೂ ಹಾವು ಯಾರಿಗೂ ಏನನ್ನೂ ಮಾಡದೆ ಸುಮ್ಮನಿರುತ್ತಿತ್ತು. ದಷ್ಟಪುಷ್ಟವಾಗಿದ್ದ ಹಾವು ಕೃಷವಾಗಿ ಮಾರ್ಪಟ್ಟಿತ್ತು.
ಹೀಗೆ ಹಲವಾರು ದಿನ ಕಳೆದ ನಂತರ ಆ ಸನ್ಯಾಸಿ ಅದೇ ಮಾರ್ಗವಾಗಿ ಹೋಗುತ್ತಿದ್ದ. ಅವನು ಆ ಗೋಪಾಲಕರ ಕುತ್ತಿಗೆಯಲ್ಲಿ ಸುತ್ತಿ ಕೊಂಡಿದ್ದಂತಹ ಹಾವನ್ನು ನೋಡಿ ಅವನಿಗೆ ಕನಿಕರ ಉಂಟಾಯಿತು. ಅವನು ಗೋಪಾಲಕರಿಂದ ಆ ಹಾವನ್ನು ಬಿಡಿಸಿ ಹಾವಿಗೆ ಹೇಳಿದ
“ಅವರಿವರಿಗೆ ಹೆದರಿಸಿ ಓಡಾಡಿಕೊಂಡು ಇದ್ದಂತಹ ನಿನಗೇಕೆ ಇಂತಹ ಪರಿಸ್ಥಿತಿ ಬಂತು?” ಎಂದು ಕೇಳಿದಾಗ ಹಾವು ಹೇಳಿತು,
“ಸ್ವಾಮಿ ತಾವು ಹೇಳಿದಂತೆ ನಾನು ಶಿರಸಾವಹಿಸಿ ಪಾಲಿಸುತ್ತಿದ್ದೇನೆ. ನಾನು ಯಾರಿಗೂ ನನ್ನಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ.”
ಆಗ ಸನ್ಯಾಸಿ ಹೇಳಿದ
“ನೋಡು ನಾನು ನಿನಗೆ ಹೇಳಿದ್ದು ಯಾರಿಗೂ ಸುಮ್ಮನೆ ತೊಂದರೆ ಕೊಡಬೇಡವೆಂದು ಮಾತ್ರ. ಆದರೆ ನಾನು ನಿನಗೆ ಎಂದೂ ಬುಸುಗುಟ್ಟಬೇಡವೆಂದು ಹೇಳಿಲ್ಲ. ಬಸುಗುಟ್ಟುವುದು ನಿನ್ನ ಮೂಲ ಗುಣ. ನೀನು ಸುಮ್ಮನೆ ಯಾರಿಗೂ ತೊಂದರೆ ಕೊಡುಬೇಡ. ಆದರೆ ನೀನು ನಿನ್ನ ರಕ್ಷಿಸಿಕೊಳ್ಳುವ ಹಕ್ಕು ನಿನಗಿದೆ. ನಿನ್ನ ರಕ್ಷಣೆಗದು ಅನಿವಾರ್ಯ ಸಹ ಹೌದು.” ಎಂದು ತಿಳಿಹೇಳಿದ.
ನಂತರ ಹಾವು ತನ್ನ ಬಳಿ ಬಂದವರಿಗೆ ಬುಸುಗುಡಲಾರಂಭಿಸಿತು. ಇದರಿಂದ ಹೆದರಿದ ಜನರು ಆ ಹಾವಿಗೆ ಉಪಟಳ ಕೊಡುವುದನ್ನು ನಿಲ್ಲಿಸಿದರು. ಬಳಿಕ ಮುಂದೆಂದೂ ಅದರ ಸಮೀಪವೂ ಸುಳಿಯದಾದರು.