ಲೇಖನ
– ರಶ್ಮಿ ಕೆ. ವಿಶ್ವನಾಥ್.
ಮೈಸೂರು
ಉದಯರಶ್ಮಿ ದಿನಪತ್ರಿಕೆ
ಲಿಂಗಗಳಲ್ಲಿ 3 ವಿಧ. ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿಗಳು.
ಕೋರ್ಟು ಅದ್ಯಾವ ಆಧಾರದ ಮೇಲೆ ಅವರಿಗೆ ‘ತೃತೀಯ ಲಿಂಗಿ’ ಎಂದು ಕರೆಯಿತೋ ಗೊತ್ತಿಲ್ಲ. ಹಾಗಾದರೆ ‘ಪುರುಷ, ಮಹಿಳೆ’ ಇವರಿಬ್ಬರಲ್ಲಿ ‘ಪ್ರಥಮ, ದ್ವಿತೀಯ’ ಯಾರು? ತಿಳಿಯದು.
ಇರಲಿ.
ಇಲ್ಲಿಯ ವಿಷಯ ಬೇರೆಯೆ ಇದೆ
ಮೊನ್ನೆ ಒಂದು ಸಿನಿಮಾ ನೋಡುತ್ತಾ ಕುಳಿತಿದ್ದೆ. ಅದರಲ್ಲಿ ತಾಯಿ ಇಲ್ಲದ ಮಗ -ಮಗಳನ್ನ, ಆ ಬಡವ ತಂದೆಯೆ, ತನ್ನ ಸರ್ವಸ್ವವನ್ನು ಧಾರೆಯೆರೆದು ಸಾಕುತ್ತಾ ಇರುತ್ತಾನೆ & ಇಡೀ ಕುಟುಂಬ ಒಬ್ಬರಿಗೊಬ್ಬರು ಮುಗ್ದತೆಯಿಂದ ಬೆಸೆದುಹೋಗಿರುತ್ತಾರೆ. ಅಲ್ಲೊಂದು ಚಂದದ ಜೀವನ ಅರಳಿ ನಗುತ್ತಿರುತ್ತದೆ.
ಒಬ್ಬ ಪ್ರತಿಷ್ಟಿತ ವ್ಯಕ್ತಿ ಮುಳ್ಳಿನಂತೆ ಬಂದು ‘ಆ ಮಗಳನ್ನ’ ಗರ್ಭಿಣಿ ಮಾಡಿಬಿಡುತ್ತಾನೆ. ಉಳಿದದ್ದು ಗೊತ್ತೇ ಇದೆ ಆ ತಂದೆಯೇ ತನ್ನ ಮಗಳನ್ನು ಕೆಡಿಸಿದ್ದಾನೆ ಎಂದು ಸುಳ್ಳುಕಟ್ಟಿ ಜೈಲಿಗೆ ಹಾಕಿ, ಆತ ಅವಮಾನದಿಂದ ಸಾಯುವಂತೆ ಮಾಡುತ್ತಾರೆ’.
ಇನ್ನು ಕೆಲವು ಸಿನಿಮಾಗಳಲ್ಲಿ ತಂದೆ ತಾಯಿ ಇಬ್ಬರು ಇದ್ದರೂ ಸಹ ಬೇರೆ ಯಾರೊ ದೊಡ್ಡ ಮನುಷ್ಯನಿಂದ ಹೆಣ್ಣು ಮಗುವಿನ ಮಾನಭಂಗವಾಗಿದ್ದರೆ, ಅದನ್ನು ತಂದೆಯ ಮೇಲೆಯೇ ಹಾಕುತ್ತಾರೆ. ಆ ತಾಯಿಗೆ ಹೇಗಾಗಿರಬೇಡ..
ಇದು ತುಂಬಾ ಸಿನಿಮಾಗಳಲ್ಲಿ ಕಾಮನ್ ಆಗಿಬಿಟ್ಟಿದೆ.

ಅದನ್ನ ನೋಡಿ ಅರಗಿಸಿಕೊಳ್ಳಬೇಕು ಅಂದ್ರೆ ಸ್ವಲ್ಪದಿನ ಬೇಕು.
ಆದರೆ ಇದು ಹೇಗೆ ಸಾಧ್ಯ.. ಎರಡು ಲಿಂಗಗಳು ಒಟ್ಟಿಗೆ ಇದ್ದರೆ, ಯಾರನ್ನು ಯಾರಿಗೆ ಬೇಕಾದರು ಹೋಲಿಸಿಬಿಡುವುದಾ.. ಸಂಬಂಧಗಳಲ್ಲಿ ಪಾವಿತ್ರ್ಯತ್ವಕ್ಕೆ ಬೆಲೆಯೇ ಇಲ್ಲವೆ..
ಅಂದು ನಮ್ಮ ಮೇಡಂ ಒಬ್ಬರು ಅವರ ನೆಂಟರ ಕಛೇರಿಗೆ ಯಾವುದೋ ಫಂಕ್ಷನ್ ಎಂದು ನನ್ನನ್ನೂ ಸಹ ಕರೆದುಕೊಂಡುಹೋಗಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಅವರ ಸಂಬಂಧಿ ಬಂದು ಇವರ ತಲೆಮೇಲೆ ಕೈಯಿಟ್ಟು “ಇವಾಗ ಬಂದ್ಯಾ ಬಾ” ಎಂದು ತುಂಬಾ ಅಪ್ಯಾಯಮಾನವಾಗಿ ಮಾತನಾಡಿಸಿದರು. ಅಷ್ಟು ಆಪ್ತತೆಯಿಂದ ಅವರು ಮಾತನಾಡಿಸಿದ್ದು ನನಗೆ ಮನಸು ತುಂಬಿಬಂತು. “ಮ್ಯಾಮ್ ಅವರು ಎಷ್ಟುಚೆನ್ನಾಗಿ ಚಿಕ್ಕಪಾಪುವನ್ನ ಮಾತನಾಡಿಸುವ ರೀತಿ ನಿಮ್ಮನ್ನ ಮಾತನಾಡಿಸಿದರಲ್ಲ.. ನನಗೆ ತುಂಬಾ ಇಷ್ಟ ಆಯಿತು” ಎಂದೆ.
ತಕ್ಷಣ ಅವರು ಉತ್ತರಿಸಿದ್ದು “ನನಗೆ ಅವರು ಅಣ್ಣ ಆಗಬೇಕು” ಎಂದು. ಅದೇ ಆ ಜಾಗದಲ್ಲಿ ಯಾವುದಾದರು ಸ್ತ್ರೀ ಇದ್ದಿದ್ದರೆ “ಅವರು ನನಗೆ ಅಕ್ಕ ಆಗಬೇಕು” ಎಂದು ಆ ಮೇಡಂ ಹೇಳುತ್ತಿರಲಿಲ್ಲ.
‘ಛೇ ಎಷ್ಟೇ ಒಳ್ಳೆಯ ದೃಷ್ಟಿಯಲ್ಲಿ ನಾವು ನೋಡಿದ್ದರು, ಹೇಳಿದ್ದರೂ ಸಹ ಇವರ್ಯಾಕೆ ಈ ಮಟ್ಟಕ್ಕೆ ಇಳಿದು ಉತ್ತರಿಸಿದರು’ ಎನಿಸಿತು.
ಒಮ್ಮೆ ನನ್ನ ಗೆಳತಿ ಮಾತಾಡುತ್ತಾ ಆಡುತ್ತಾ “ಮೊನ್ನೆ ನಾ ಬೆಂಗಳೂರಿನಿಂದ ಟ್ರೈನ್ ನಲ್ಲಿ ಬರುವಾಗ ಒಬ್ರು ಸರ್ ನನ್ನ ಪಕ್ಕದಲ್ಲಿ ಕೂತಿದ್ರು, ಅವರ ವೈಫ್ ನಿಮ್ಮ ಕಾಲೇಜಿನಲ್ಲೆ ಅಂತೆ ಕೆಲಸ ಮಾಡೋದು” ಎಂದು ಆ ಮೇಡಂ ಹೆಸರು ಹೇಳಿದಳು
“ಹೌದು ಕಣೆ ಅವರು ನಮ್ಮ ಕಾಲೇಜಿನಲ್ಲೆ ಇದ್ದಾರೆ. ಅವರು ಸಿಕ್ಕಾಗ ಹೇಳ್ತಿನಿ ಬಿಡು” ಎಂದೆ
ಆ ಮೇಡಂ ಸಿಕ್ಕಾಗ ಸಾಮಾನ್ಯವಾಗೇ ಈ ವಿಷಯ ಹೇಳಿದೆ.
ಅದಕ್ಕವರು “ಯಾರು.. ಯಾವಾಗ..” ಎಲ್ಲವನ್ನು ಕೇಳಿಕೊಂಡು, ನಂತರ “ಹೌದು ಹೌದು ನಮ್ಮನೆಯವರು ನನಗೆ ಹೇಳಿದ್ರು” ಎಂದರು. ಅವರು ಹೇಳುತ್ತಿರುವುದು 100% ಸುಳ್ಳು ಎಂದು ಎದ್ದುಕಾಣುತ್ತಿತ್ತು.
ನನಗೆ ಆಶ್ಚರ್ಯ ಆಯಿತು ‘ಆಯ್ಯೋ ಹೊರಗೆ ಹೋದಾಗ ಯಾರು ಯಾರ ಪಕ್ಕದಲ್ಲೋ ಕುಳಿತಿರುತ್ತೇವೆ, ಕೆಲವರು ಪರಿಚಯ ಆಗುತ್ತಾರೆ, ಕೆಲವರು ಆಗುವುದಿಲ್ಲ. ಅದರಲ್ಲಿ ತಪ್ಪೇನಿದೆ.. ಅದಕ್ಯಾಕೆ ಈ ಮೇಡಂ ‘ಅವರ ಹಸ್ಬೆಂಡ್ ಯಾವುದೇ ಮಹಿಳೆ ಜೊತೆ ಮಾತನಾಡಿದರು ತಪ್ಪದೆ ಹೆಂಡತಿಗೆ ಹೇಳುತ್ತಾರೆ ಎನ್ನುವಂತೆ ಪ್ರತಿಪಾದಿಸಬೇಕು .. ಯಾವುದೋ ಗಂಡಸಿನ ಜೊತೆ ಅವರು ಮಾತನಾಡಿದ್ದರೆ ಇವರು ಹೀಗೆ ಹೇಳುತ್ತಿರಲಿಲ್ಲ ಅಲ್ಲವೆ’ ಎನಿಸಿತು.
ಮತ್ತೊಮ್ಮೆ ನಮ್ಮ ನೆಂಟರೊಬ್ಬರು ಪೂಜೆಗೆಂದು ಊರಿನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ಬಸ್ ಮಾಡಿದ್ದರು. ಎಲ್ಲರು ಹತ್ತಿ ಕುಳಿತೆವು. “ಎರಡು ಮನೆಯವರು ಹೋಗುವ ದಾರಿಯಲ್ಲೇ ಹತ್ತಿಕೊಳ್ಳುತ್ತಾರೆ ನಾ ಹೇಳ್ತಿನಿ ಅಲ್ಲಿ ನಿಲ್ಲಿಸಿಬಿಡಪಾ” ಎಂದು ಡ್ರೈವರ್ ಗೆ ಹೇಳಿ, ಪೂಜೆ ಮಾಡಿಸುವ ಮನೆಯ ರಮೇಶ್ ಅಂಕಲ್ ಸಹ ಕುಳಿತರು. ಬಸ್ ಹೊರಟಿತು.
ಸ್ವಲ್ಪ ದೂರ ಬಸ್ ಕ್ರಮಿಸಿದಾಗ, ‘ಸ್ವಾತಿ ಯಜಮಾನ್ರು ಆ ಸ್ಟಾಪಿಗೆ ಬಂದು ನಿಂತಿದ್ದಾರಾ ಕೇಳಬೇಕಾಗಿತ್ತು, ಅವರ ಫೋನ್ ನಂಬರ್ ಇಲ್ವಲ್ಲ’ ಎಂದು ರಮೇಶ್ ಅಂಕಲ್ ಪರದಾಡುತ್ತಿದ್ದರು.
ಸ್ವಾತಿ ನಮ್ಮ ನೆಂಟರು. ಅವಳ ಗಂಡ ನನ್ನ ಹಳೆಯ ಕಂಪನಿಯಲ್ಲಿ ಸಹೋದ್ಯೋಗಿ ಆಗಿದ್ದವ. ಹಾಗಾಗಿ ಫೋನ್ ನಂಬರ್ ನನ್ನ ಬಳಿ ಇತ್ತು & ಹೆಸರಿಡಿದು ಕರೆಯುವುದು ರೂಡಿ. ಅದೂ ಎಲ್ಲರಿಗೂ ಗೊತ್ತು.
“ನನ್ನತ್ರ ಫೋನ್ ನಂಬರ್ ಇದೆ ಕೇಳಲಾ ಅಂಕಲ್” ಎಂದೆ.
“ಕೇಳಮ್ಮ” ಎಂದರು.
ನಾ ಕೇಳಿದ್ದು ಆಯ್ತು, ಅವ ಹೇಳಿದ್ದು ಆಯ್ತು. ಅದನ್ನ ಅಂಕಲ್ ಗೆ ನಾ ಹೇಳಿದ್ದು ಆಯ್ತು.
ಆ ಸ್ಟಾಪ್ ಬಂದಾಗ ಸ್ವಾತಿ ಮತ್ತವಳ ಗಂಡ ಇಬ್ಬರೂ ಬಸ್ ಹತ್ತಿಕೊಂಡರು. ಅವಾಗ ನನಗೆ ತಿಳಿದದ್ದು ಸ್ವಾತಿ ಪತಿ ಅಷ್ಟೇ ಅಲ್ಲ, ಸ್ವಾತಿ ಕೂಡಾ ಅಫೀಸಿಗೆ ರಜ ಹಾಕಿ ಇಲ್ಲಿಗೆ ಬರುತ್ತಿದ್ದಾಳೆ ಎಂದು. ‘ಅಯ್ಯೋ ಅದು ಗೊತ್ತಿದ್ದರೆ ಅವಳಿಗೇನೇ ಫೋನ್ ಮಾಡಬಹುದಿತ್ತು…’ ಎಂದುಕೊಂಡೆ ಸುಮ್ಮನಾದೆ.
ಯಾವಾಗಲೂ ನನ್ನೊಂದಿಗೆ ತುಂಬಾ ಚೆನ್ನಾಗಿರುವ ಸ್ವಾತಿ ಅಂದು ನನ್ನೊಂದಿಗೆ ಮಾತೇ ಆಡುತ್ತಿಲ್ಲ. ಆಶ್ಚರ್ಯ ಆಯ್ತು. ಯಾಕೆ ಎಂದು ಯೋಚಿಸಿದೆ. ಸ್ವಲ್ಪ ಸಮಯದ ನಂತರ, “ಸ್ವಾತಿ ನೀ ಸಹ ಬರ್ತಾ ಇದ್ದಿಯಾ ಅಂತ ಗೊತ್ತೇ ಇರ್ಲಿಲ್ಲ ಕಣೆ. ರಮೇಶ್ ಅಂಕಲ್, ನನ್ನತ್ರ ಫೋನ್ ನಂಬರ್ ಇಲ್ಲ, ಸ್ವಾತಿ ಮನೆಯವರಿಗೆ ಫೋನ್ ಮಾಡಿ ಕೇಳಮ್ಮ ಅಂದ್ರು ಅದಕ್ಕೆ ಕೇಳಿದೆ. ನೀ ಬಂದದ್ದು ಒಳ್ಳೆಯದೆ ಆಯ್ತು” ಎಂದೆ.
“ಅಯ್ಯೋ ಅದರಲ್ಲೇನಿದೆ ಬಿಡಕ್ಕಾ” ಎಂದವಳು, ನಂತರ ಮೊದಲಿನಂತೆ ಚೆನ್ನಾಗಿ ಮಾತನಾಡಲಾರಂಭಿಸಿದಳು.
‘ಅಯ್ಯೋ ದೇವಾ ಇಷ್ಟೊಂದು ಅನುಮಾನವಾ’ ಎನ್ನಿಸಿತು.
ನನ್ನ ಫ್ರೆಂಡ್ ಒಬ್ಬಳಿದ್ದಾಳೆ. ಅವಳ ಕಸಿನ್ ತಂಗಿ & ಅವಳ ಓರಗಿತ್ತಿ (co-sister) ಸಹ ಹಾಗೆ ಅಂತೆ ಇವಳ ಜೊತೆ ಮಾತನಾಡದಂತೆ ಅವರವರ ಗಂಡಂದಿರನ್ನು ಬಿಗಿ ಮಾಡಿಕೊಂಡಿದ್ದಾರೆ.
‘ತಂಗಿಗಂಡ ತಮ್ಮನಂತೆ, ಮೈದುನ ಮಗನಂತೆ’ ಎಂದು ತಿಳಿದಿರುವ ನನ್ನ ಗೆಳತಿಗೆ ಬೇಸರ. ಮೊದಲೇ ಹೆಚ್ಚೇನು ಮಾತನಾಡುವ ಅಭ್ಯಾಸವಿಲ್ಲದ ಅವಳು ‘ಬೇಡಾ ಬಿಡು’ ಎಂದುಕೊಂಡು ಸುಮ್ಮನಾಗಿಬಿಟ್ಟಿದ್ದಾಳೆ.
ಇದೆಲ್ಲಾ ನೋಡಿದಾಗ ಕಸಿವಿಸಿ ಆಗುತ್ತದೆ. ‘ಇಷ್ಟು ಸಂಕುಚಿತ ಮನಸ್ಸಿನ ಮನುಷ್ಯರೂ ಇದ್ದಾರಲ್ಲ’ ಎನ್ನಿಸಿಬಿಡುತ್ತದೆ.
ಹೌದು ಸ್ತ್ರೀ ಮತ್ತು ಪುರುಷ ಇದ್ದಾಗ ಕೆಲವು ಸನ್ನಿವೇಶಗಳಲ್ಲಿ ಅನುಮಾನಿಸುವುದು ತಪ್ಪಿಲ್ಲ. ಆದರೆ ಎಲ್ಲಾ ಸನ್ನಿವೇಶಗಳು.. ಸಂದರ್ಭಗಳು.. ಸಂಬಂಧಗಳಲ್ಲೂ ಹೀಗೆ ಅನುಮಾನಿಸುತ್ತಾ ಹೋದರೆ, ಸಂಬಂಧಗಳಿಗೆ ಬೆಲೆ ಎಲ್ಲಿ..? ನಂಬಿಕೆಗೆ ನೆಲೆ ಎಲ್ಲಿ..?


