ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಐಸಿಎಸ್‌ಇ) ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನ ಅರ್ಥಪೂರ್ಣ ಆಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಐಸಿಎಸ್‌ಇ) ಸ್ಕೂಲ್ ನಲ್ಲಿ ಶುಕ್ರವಾರ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಪ್ರಾಚಾರ್ಯ ವಿಕ್ರಂ ನಾರ್ವೆಕರ ಮಾತನಾಡಿ, ಪರಿಸರ ನಮ್ಮ ಜೀವನಕ್ಕೆ ಆಧಾರವಾಗಿದೆ. ಗಾಳಿ, ನೀರು, ಮಣ್ಣು, ಮರಗಳು, ಪ್ರಾಣಿಗಳು ಪರಿಸರದ ಪ್ರಮುಖ ಅಂಗಗಳಾಗಿವೆ. ಆರೋಗ್ಯಕರ ಪರಿಸರವಿಲ್ಲದೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಪರಿಸರ ಉಳಿಸಿ, ಮರಗಳನ್ನು ಬೆಳೆಸುವದರಿಂದ ಗುಣಮ್ಟಟದ ಆಮ್ಲಜನಕ ಪಡೆಯಲು ಸಾಧ್ಯ. ಪ್ರತಿಯೊಬ್ಬರು ತಂತಮ್ಮ ಹುಟ್ಟು ಹಬ್ಬದಂದು ಒಂದೊಂದು ಗಿಡ ನೆಡುವ ಮೂಲಕ ಪರಿಸರ ಸ್ನೇಹಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳು ಪರಿಸರ ಸಂಬಂಧಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಪರಿಸರ ಸಂರಕ್ಷಣೆ ಕುರಿತು ನಾಟಕ ಪ್ರದರ್ಶಿಸಿದ ಮಕ್ಕಳು, ಭಾಷಣವನ್ನೂ ಮಾಡಿದರು. ಅಲ್ಲದೇ, ಪರಿಸರ ಜಾಗೃತಿ ಕುರಿತು ಘೋಷಣೆ ಹಾಕಿ ಭಿತ್ತಿ ಪತ್ರ ಪ್ರದರ್ಶಿಸಿದರು. ನಂತರಪಥ ಸಂಚಲನ ಮೂಲಕ ನಾನಾ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟು ಕಾಗದ ಮತ್ತು ಬಟ್ಟೆಯ ಚೀಲಗಳನ್ನು ಬಳಸಿ ಪರಿಸರ ಸಂರಕ್ಷಿಸಿ ಎಂದು ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಸಂಯೋಜಕಿ ಜಯಾ ಗಲಗಲಿ ಸೇರಿದಂತೆ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

