ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಪದಾಧಿಕಾರಿಗಳು ಬೆಳೆ ಸಮೀಕ್ಷೆದಾರರನ್ನು ಸರ್ಕಾರ ಕನಿಷ್ಠ ವೇತನ ನೀತಿಯಡಿ ದಿನಗೂಲಿ ಕಾರ್ಮಿಕರೆಂದು ನೇಮಕ ಮಾಡುವಂತೆ ಆಗ್ರಹಿಸಿ ಸಿಎಂ ಅವರಿಗೆ ಬರೆದ ಮನವಿಯನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಮಂಗಳವಾರ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ತಾಲೂಕಾ ವ್ಯಾಪ್ತಿಯಲ್ಲಿ 2025-26ರ ಮುಂಗಾರು ಹಂಗಾಮಿನ ನಿಖರವಾದ ಮಾಹಿತಿ ಮೇರೆಗೆ 95 ಜನರು ಸುಮಾರು 7-8 ವರ್ಷಗಳಿಂದ ಬೆಳೆ ಸಮೀಕ್ಷೆದಾರರಾಗಿ ಕೃಷಿ ಇಲಾಖೆಯಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರೂ ಹೊಲ-ಗದ್ದೆಗಳಲ್ಲಿ ಜವಾಬ್ದಾರಿಯುತವಾದ ಕಾರ್ಯದಲ್ಲಿ ತೊಡಗಿಕೊಂಡು ಬೆಳೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಹಲವಾರು ಬಾರಿ ಅನೀರಿಕ್ಷಿತ ಅವಘಡಗಳಿಗೆ ತುತ್ತಾಗಿದ್ದರೂ ಕೂಡಾ ನಮ್ಮ ಮೇಲಾಧಿಕಾರಿಗಳ ಆಣತಿಯಂತೆ ಸರಿಯಾದ ಸಮಯದೊಳಗೆ ನಮ್ಮ ಜೀವದ ಹಂಗು ತೊರೆದು ನಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ.ಇಷ್ಟಾಗಿಯೂ ನಮಗೆ ಮುಂಗಾರು, ಹಿಂಗಾರು, ಹಾಗೂ ಬೇಸಿಗೆ ಅಂತ ಹಂಗಾಮುಗಳಿಗೆ ಅನುಗುಣವಾಗಿ ನಮ್ಮನ್ನು ಬಳಸಿಕೊಂಡು ಒಂದು ವರ್ಷದಲ್ಲಿ ಕೇವಲ 2 ತಿಂಗಳುಗಳ ಕಾಲ ಕೆಲಸ ನೀಡಲಾಗುತ್ತಿದೆ.
ಅವಶ್ಯಕತೆ ಇದ್ದಾಗ ಮಾತ್ರ ಸರ್ಕಾರದ ಸೇವೆಗೆ ಟಿಶ್ಯೂ ಪೇಪರ್ ತರಹ ನಮ್ಮನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ವರ್ಷದಲ್ಲಿ ಕೇವಲ 2 ತಿಂಗಳುಗಳ ಸೇವೆಗೆ ಮಾತ್ರನೇ ಸೀಮಿತ ಗೊಳಿಸಲಾರದ ಕನಿಷ್ಠ ವೇತನ ನೀತಿ ಅಡಿಯಲ್ಲಿ ನಮಗೆಲ್ಲ ದಿನಗೂಲಿ ಕಾರ್ಮಿಕರನ್ನಾಗಿ ನೇಮಕಗೊಳಿಸಿ ವರ್ಷಪೂರ್ತಿ ಕೆಲಸ ನೀಡಬೇಕು. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಪರಿಶೀಲಿಸಿ ಸ್ಪಂದಿಸಿ ನಮಗೆ ಬದುಕು ಕಟ್ಟಿಕೊಳ್ಳಲು ನೆರವಾಗಬೇಕೆಂದು ತಿಳಿಸಲಾಗಿದೆ. ಈ ಮನವಿಯನ್ನು ಪ್ರತ್ಯೇಕವಾಗಿ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಎಂ.ಎಚ್.ಯರಝರಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ತಾಲೂಕಾಧ್ಯಕ್ಷ ಶಿವರಾಜ ಪೂಜಾರಿ, ಪದಾಧಿಕಾರಿಗಳಾದ ಬಸವರಾಜ ಗುಡೂರ, ಸಂಗಮೇಶ ಮುರಾಳ, ಮಲ್ಲು ಬೊಮ್ಮನಹಳ್ಳಿ, ರಾಜಶೇಖರ ವಾಲಿಕಾರ, ಮುತ್ತಪ್ಪ ಕೊಂಡಗುಳಿ, ಮುಖಂಡರಾದ ಕಲ್ಲು ಸೊನ್ನದ, ಅಶೋಕ ಹಾರಿವಾಳ ಇತರರು ಇದ್ದರು.

