ಕೆರೆಗಳಲ್ಲಿ ನೀರು ಸಂಗ್ರಹ | ಹೆಚ್ಚಿದ ಬಾವಿ, ಕೊಳವೆ ಬಾವಿಗಳ ಅಂತರ್ಜಲಮಟ್ಟ | ಕಡಿಮೆಯಾದ ಕುಡಿವ ನೀರಿನ ತಾಪತ್ರಯ
ಉದಯರಶ್ಮಿ ದಿನಪತ್ರಿಕೆ
ವರದಿ: ಇಲಾಹಿ ಇ. ಜಮಖಂಡಿ
ಚಿಮ್ಮಡ: ಮಂಗಳವಾರ ಹಾಗೂ ಶುಕ್ರವಾರ ರಾತ್ರಿ ಸುರಿದ ಕೃತ್ತಿಕಾ ಮಳೆಯಿಂದ ಈ ಭಾಗದಲ್ಲಿ ವಾತಾವರಣವೇ ತಂಪೆರೆದಂತಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ ಅವರು ಖುಷಿಯಿಂದಲೇ ತಮ್ಮ ಬಿತ್ತನೆ ಕಾರ್ಯಕ್ಕೆ ಅಣಿಯಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಜಮೀನು ಹದಮಾಡಿಕೊಂಡು ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತಿದ್ದ ರೈತರಿಗೆ ಈ ವಾರದಲ್ಲಿ ಸುರಿದ ಮಳೆ ಅವರಲ್ಲಿ ಆಶಾ ಭಾವನೆ ಮೂಡಿಸಿದ್ದು ವರುಣದೇವನ ಮೇಲೆ ಭಾರ ಹಾಕಿ ಬಹುತೇಕ ರೈತರು ಬಿತ್ತನೆ ಪ್ರಾರಂಭಿಸಿದ್ದಾರೆ.
ಎಪ್ರಿಲ್ ನಲ್ಲಿಯೇ ಸುರಿಯುವ ಅಶ್ವಿನಿ, ಭರಣಿ ಮಳೆಗೆ ರೈತರು ತಮ್ಮ ಜಮೀನುಗಳನ್ನು ಹದಗೊಳಿಸಿ ತಿಪ್ಪೆಗೊಬ್ಬರವನ್ನು ಗದ್ದೆಗಳಲ್ಲಿ ಮಿಶ್ರಣಗೊಳಿಸುತ್ತಿದ್ದರು, ಆದರೆ ಅವೆರಡೂ ಮಳೆಗಳು ಕೈಕೊಟ್ಟ ಪರಿಣಾಮ ರೈತರಲ್ಲಿ ಆತಂಕ ಮೂಡಿಸಿತ್ತು ಆದರೆ ಕೃತ್ತಿಕಾ ಮಳೆ ಸಕಾಲಕ್ಕೆ ಸುರಿದ ಪರಿಣಾಮ ಈ ಬಾಇ ಬಿತ್ತನೆ ಕಾರ್ಯವೂ ಸರಿಯಾದ ಸಮಯಕ್ಕೆ ನಡೆಯುತ್ತಿದೆ ಅಲ್ಲದೇ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಇಲ್ಲಿನ ಘಟಪ್ರಭಾ ಎಡದಂಡೆ ಕಾಲುವೆಗೆ ಹತ್ತು ದಿನದಂತೆ ಎರಡುಬಾರಿ ನೀರು ಹರಿಸಲಾಗಿದ್ದರಿಂದ ಕೆರೆಗಳಲ್ಲಿ ನೀರು ಸಂಗ್ರಹಿಸಲಾಗಿದ್ದು ಇದರಿಂದ ಬಾವಿ, ಕೊಳವೆ ಬಾವಿಗಳ ಅಂತರ್ಜಲಮಟ್ಟ ಹೆಚ್ಚಿದ್ದು ಕುಡಿಯುವ ನೀರಿನ ತಾಪತ್ರಯ ಈ ಬಾರಿ ಕಡಿಮೆಯಾದಂತಾಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆ ಈ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಬಿಸಿಲ ಬೇಗೆಯಿಂದ ತತ್ತರಿಸುತಿದ್ದ ಜನರಿಗೆ ಧಗೆಯಿಂದ ಮುಕ್ತಿದೊರೆತಂತಾಗಿದ್ದು. ರೈತರು ಹರ್ಷಗೊಂಡಿದ್ದಾರೆ. ಈಗ ಬಹುತೇಕ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದು. ಇದರಿಂದ ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದೆ ಕಂಗಾಲಾಗಿದ್ದ ಕೂಲಿಕಾರರಿಗೆ ಕೆಲಸ ದೊರೆತಿದ್ದು ಅವರೂ ಖುಷಿಯಿಂದಲೇ ಗದ್ದೆಗಳತ್ತ ಹೆಜ್ಜೆ ಹಾಕುತಿದ್ದಾರೆ.
“ಘಟಪ್ರಭಾ ಎಡದಂಡೆ ಕಾಲುವೆಗೆ ಎರಡುಬಾರಿ ನೀರು ಹರಿಸಿದ್ದರಿಂದ ಹಾಗೂ ಸಕಾಲಕ್ಕೆ ಕ್ರತ್ತಿಕಾ ಮಳೆ ಸುರಿದದ್ದು ಬಿತ್ತನೆ ಕಾರ್ಯಕ್ಕೆ ಅನುಕೂಲಕರವಾಗಿದ್ದು, ಕೆರೆ, ಬೊರವೆಲ್, ಬಾವಿಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದೆ, ಈ ಬಾರಿ ಅರಿಷಿನ, ಕಬ್ಬು ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದು, ಮುಂಬರುವ ರೋಹಿನಿ, ಮೃಗಶಿರ ಮಳೆಗಳು ಸಮರ್ಪಕವಾಗಿ ಸುರಿದರೆ ಈ ವರ್ಷದ ಬರಗಾಲ ಛಾಯೆಯಿಂದ ರೈತರು ಬಚಾವಾಗಲಿದ್ದಾರೆ.”
– ವಿನಾಯಕ ಹಟ್ಟಿ
ಯುವ ರೈತರು ಚಿಮ್ಮಡ

