ವಿಜಯಪುರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಹತ್ವದ ಈ ಹಿಂದಿನ ದಿನಗಳಲ್ಲಿ ಚರ್ಚೆ ಬಂದಾಗ ಮಸೂದೆಯ ಪ್ರತಿಯನ್ನೇ ಹರಿದು ಹಾಕಿದ್ದರು, ಮಹಿಳೆಯಿಂದ ಆಡಳಿತ ಅಸಾಧ್ಯ ಎನ್ನುವ ಮನೋಭಾವನೆ ಇತ್ತು, ಆದರೆ ಮಹಿಳೆ ಸಬಲಳು, ಆಕೆ ಆಡಳಿತ ನಡೆಸಲು ಸಮರ್ಥಳು ಎಂಬ ಸಕಾರಾತ್ಮಕ ಭಾವ ಮೂಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದು, ನಾರಿಶಕ್ತಿ ವಂದನ್ ಕಾಯ್ದೆಯ ಮೂಲಕ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಗೆ ಅಪೂರ್ವ ಹೆಜ್ಜೆ ಇರಿಸಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಮಹಿಳೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಅವರು ಅನೇಕ ಕಾರ್ಯಕ್ರಮ ಕೈಗೊಂಡರು, ಬೇಟಿ ಬಚಾವೋ ಬೇಟಿ ಪಡಾವೋ, ಉದ್ಯೋಗದಲ್ಲಿ ಮಹಿಳೆಯ ಸಿಂಹಪಾಲು ಹೀಗೆ ನಾನಾ ರೀತಿಯ ಕ್ರಮಗಳಿಂದಾಗಿ ಸ್ತ್ರೀ ಶಕ್ತಿ ಇನ್ನಷ್ಟೂ ಬಲಗೊಳ್ಳಲು ಸಾಧ್ಯವಾಗಿದೆ ಎಂದರು.
ಮಹಿಳಾ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಫಲವಾಗಿ ಉನ್ನತ ಮಟ್ಟದಲ್ಲಿದ್ದು, ಅಮೇರಿಕೆಯಲ್ಲಿ ಮಹಿಳೆಯರ ಉನ್ನತ ಶಿಕ್ಷಣ ಅಧ್ಯಯನ ಪ್ರಮಾಣ ಶೇ.೩೪ ರಷ್ಟಿದ್ದರೆ, ನಮ್ಮ ಭಾರತದಲ್ಲಿ ಶೇ೪೩ ರಷ್ಟು ಪ್ರಮಾಣದಲ್ಲಿ ಮಹಿಳೆ ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ, ಭಾರತದಲ್ಲಿ ಅತೀ ಹೆಚ್ಚು ಅಂದರೆ ಶೇ.೧೫ ರಷ್ಟು ಪ್ರಮಾಣದಲ್ಲಿ ಮಹಿಳಾ ಪೈಲೆಟ್‌ಗಳಿದ್ದಾರೆ, ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ವಹಿಸಿದ್ದೂ ಸಹ ಮಹಿಳೇಯರೇ, ಈ ರೀತಿ ಮಹಿಳೆ ಸಬಲೀಕರಣದ ದಾರಿಯಲ್ಲಿ ಶರವೇಗದಲ್ಲಿ ಸಾಗಿದ್ದಾಳೆ ಎಂದರು.
ಭ್ರೂಣ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ದಿಟ್ಟ ಕ್ರಮಗಳಿಂದಾಗಿಯೇ ಲಿಂಗಾನುಪತದಲ್ಲಿದ್ದ ವ್ಯತ್ಯಾಸ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ಲಿಂಗಾನುಪಾತ ಸರಿಸಮ ಹಂತಕ್ಕೆ ತಲುಪಿದೆ ಎಂದರು.
ಶಾಸನ ಸಭೆಗಳಲ್ಲಿ ಶೇ.೩೩ ರಷ್ಟು ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನ್ ಕಾಯ್ದೆ ಜಾರಿ ಒಂದು ಬದಲಾವಣೆಯ ಪರ್ವ, ೨೦ ಕ್ಕೂ ಹೆಚ್ಚು ರಾಜ್ಯಗಳಲ್ಲಿ ಶೇ.೪೦ ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆ ಸಮರ್ಥವಾಗಿ ಆಡಳಿತ ಯಂತ್ರವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಈ ಹಿಂದೆ ಸ್ತ್ರೀಯರ ಹೆಸರಿನಲ್ಲಿ ಆಸ್ತಿ ಇರುವುದೇ ಅಪರೂಪವಾಗಿತ್ತು, ಆದರೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ಶೇ.೮೦ ರಷ್ಟು ಮಹಿಳೆಯರಿಗೆ ಆಯಾ ಮನೆಯ ಮಾಲೀಕತ್ವ ನೀಡಿರುವುದು ಒಂದು ಅಪೂರ್ವ ಹೆಜ್ಜೆ ಎಂದರು.
ಆಡಳಿತದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕಿದೆ, ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಡಾ.ಅಂಬೇಡ್ಕರ ಅವರನ್ನು ಪ್ರತಿನಿತ್ಯ ನೆನೆಯಬೇಕು, ಈ ಮತದಾನದ ಹಕ್ಕಿನ ಬಲದಿಂದಲೇ ಆಡಳಿತದಲ್ಲಿ ಒಳಗೊಳ್ಳುವಿಕೆ ಸಾಧ್ಯವಾಗಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ, ಪಾಲಿಕೆ ಸದಸ್ಯೆ ಸ್ವಪ್ನಾ ಕಣಮುಚನಾಳ ಮಾತನಾಡಿ, ಈ ಮಹತ್ವದ ಕಾಯ್ದೆ ಜಾರಿಗೊಳಿಸಿದ ಪ್ರಧಾನಿ ಅವರನ್ನು ಅಭಿನಂದನೆ ನೀಡಲು ಮಿಸ್ ಕಾಲ್ ನೀಡುವ ಅಭಿಯಾನವನ್ನು ವಿಜಯಪುರದಲ್ಲಿ ಕೈಗೊಳ್ಳಲಾಗುತ್ತಿದೆ,
ಶಿಲ್ಪಾ ಕುದರಗೊಂಡ, ಗೀತಾ ಚೌಧರಿ, ಈರಣ್ಣ ರಾವೂರ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

