ಮುದ್ದೇಬಿಹಾಳ ನ್ಯಾಯಾಲಯದಲ್ಲಿ ಸಂಭ್ರಮದ ಸ್ವಾತಂತ್ರ‍್ಯ ದಿನಾಚರಣೆ | ನ್ಯಾ.ಕೌಶಿಕ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸ್ವಾತಂತ್ರ‍್ಯದ ನಿಜವಾದ ಅರ್ಥವನ್ನು ಅರಿತು, ದೇಶದ ಕಾನೂನು ಮತ್ತು ಸಂವಿಧಾನದ ಆಶಯಗಳನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ೮೦ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ರಾಷ್ಟçಧ್ವಜಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ‍್ಯ ದೊರೆತಿರುವುದು ಕೇವಲ ಸಂಭ್ರಮಿಸಲಿಕ್ಕಲ್ಲ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಮತ್ತು ದೇಶದ ಸಂವಿಧಾನ ನೀಡಿರುವ ಮೌಲ್ಯಗಳನ್ನು ನೆನಪಿಸಿಕೊಳ್ಳುವ ಜೊತೆಗೆ ಸ್ವಾತಂತ್ರ‍್ಯದ ಮೌಲ್ಯ ಉಳಿಸುವ ಹೊಣೆ ಪ್ರತಿಯೊಬ್ಬ ನಾಗರಿಕನಮೇಲಿದೆ ಎನ್ನುವದನ್ನು ಯಾರೊಬ್ಬರೂ ಮರೆಯಬಾರದು ಎಂದರು.
ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಅವರು ಮಾತನಾಡಿ, ಪ್ರತಿಯೊಬ್ಬ ನಾಗರಿಕರೂ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ವಿಶೇಷವಾಗಿ ನ್ಯಾಯಾಂಗ ವ್ಯವಸ್ಥೆ ದೇಶದ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದು, ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುವ ನೊಂದ ಪಕ್ಷಗಾರರಿಗೆ ಕಾನೂನು ಅರಿತ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳು ಪೂರಕ ವಾತಾವರಣ ನಿರ್ಮಿಸಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದೇ ನಾವು ದೇಶಕ್ಕೆ ನೀಡಬಹುದಾದ ನೈಜ ಕೊಡುಗೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಬಸವ ಕಲ್ಯಾಣದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಆರ್.ಕುಲಕರ್ಣಿ ಅವರು ಮಾತನಾಡಿ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ನ್ಯಾಯ, ಸಮಾನತೆ, ಸ್ವಾತಂತ್ರ‍್ಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ವಾತಂತ್ರ‍್ಯ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಧ್ಜಾರೋಹಣಕ್ಕೂ ಮೊದಲು ಮಹಾತ್ಮಾ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಜ್ಞಾನ ಭಾರತಿ ವಿದ್ಯಾ ಮಂದಿರದ ಶಿಕ್ಷಕಿಯರಾದ ರಚನಾ ಕುಲಕರ್ಣಿ ಮತ್ತು ದೀಪಿಕಾ ಪೂಜಾರಿ ವಂದೇ ಮಾತರಂ ಗೀತೆ ಪಠಿಸಿದರು. ಪಿಪಿ ವಿ.ಜಿ.ಮಾಮನಿ, ಎಪಿಪಿ ಬಸವರಾಜ ಆಹೇರಿ, ಅಪರ್ ಸರ್ಕಾರಿ ವಕೀಲರಾದ ಎಚ್.ಎಲ್.ಸರೂರ, ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ, ನ್ಯಾಯವಾದಿಗಳು ಭಾಗಿಯಾಗಿದ್ದರು.
ನ್ಯಾಯವಾದಿಗಳ ಸಂಘದಿಂದ ಸ್ವಾತಂತ್ರೋತ್ಸವ
ಇಲ್ಲಿನ ನ್ಯಾಯವಾದಿಗಳ ಸಂಘದಿಂದ ನಡೆದ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಾಮಾಣಿಕತೆ, ಶಿಸ್ತು, ಪ್ರೀತಿ, ದೇಶದ ಐಕ್ಯತೆ, ಕರುಣೆ ಹಾಗೂ ದೇಶಪ್ರೇಮದಂತಹ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡು ಜೀವನ ನಡೆಸಿದಾಗ ಮಾತ್ರ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹನೀಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ ಅವರು ಮಾತನಾಡಿ, ನಮ್ಮ ದೇಶ ಸ್ವಾತಂತ್ರ್ಯ ಪಡೆದ ಮೇಲೆ ಏನು ಸಾಧನೆ ಮಾಡಿದ್ದೇವೆ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗದೆ. ಸಾಕಷ್ಟು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದೇವೆ ಎಂದಾದರೂ ಪ್ರತೀ ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕೆಲವು ಕುತಂತ್ರಿಗಳು ದೇಶವನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸಬೇಕೆನ್ನುವ ಮನಸ್ಥಿತಿ ಹೊಂದಿದ್ದಾರೆ. ಹೀಗಾದಲ್ಲಿ ದೇಶದ ಐಕ್ಯತೆಯನ್ನು ಕಾಪಾಡುವಲ್ಲಿ ವಿಫಲರಾಗುತ್ತೇವೆ ಎಂದರು.
ಇದೇ ವೇಳೆ ಜಯಾ ಸಾಲಿಮಠ ವಕೀಲರು ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಎಚ್.ಜಿ.ನಾಗೋಡ, ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ಹಿರಿಯ ವಕೀಲರಾದ ಜೆ.ಎ.ಚಿನಿವಾರ, ಎಂ.ಎ.ಮುದ್ದೇಬಿಹಾಳ, ಬಿ.ಆರ್.ನಾಡಗೌಡ, ಎಂ.ಎಚ್.ಕ್ವಾರಿ, ವಿ.ಜಿ.ಮದರಕಲ್ಲ, ಎಚ್.ವಾಯ್.ಪಾಟೀಲ, ವಿ.ಎಸ್.ಸಾಲಿಮಠ, ಎನ್.ಜಿ.ಕುಲಕರ್ಣಿ, ಎಸ್.ಆರ್.ಸಜ್ಜನ, ಎಸ್.ಎಂ.ಕಿಣಗಿ, ಎಂ.ಆರ್.ಪಾಟೀಲ ನ್ಯಾಯವಾದಿಗಳಾದ ಚೇತನ ಶಿವಶಿಂಪಿ, ಎಂ.ಬಿ.ಬಿರಾದಾರ, ಬಸಣ್ಣ ಮುಂದಿನಮನಿ, ಎನ್.ಐ.ಕೇಸಾಪೂರ, ರವಿ ನಾಲತವಾಡ, ಎನ್.ಎಸ್.ಪಾಟೀಲ, ಸಾಬಣ್ಣ ಚಳ್ಳಗಿ, ವಿರೇಶ ಹಿರೇಮಠ, ಸಂತೋಷ ನಾಯಕ, ರಾಜೇಶ್ವರಿ ಕೌಶಿಕ್, ಶ್ರೀದೇವಿ ರಾಜೂರ, ಹಸೀನಾ ಅನಂತಪೂರ, ರೇಣುಕಾ ಪಾಟೀಲ, ರಶ್ಮಿ ಕುಲಕರ್ಣಿ, ಪಿ.ಎ.ಹಿರೇಮಠ, ಎಸ್.ಆರ್.ಅಮರಣ್ಣವರ, ಬುಡ್ಡಾ ನಾಲತವಾಡ ಸೇರಿದಂತೆ ಮತ್ತೀತರರು ಭಾಗಿಯಾಗಿ ಸ್ವಾತಂತ್ರೋತ್ಸವ ದಿನವನ್ನು ಸಂಭ್ರಮಿಸಿದರು.

