ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೊಳಚೆ ಪ್ರದೇಶಾಭಿವೃದ್ಧಿ ವತಿಯಿಂದ ಈಗಾಗಲೇ ೩೨೧ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಅದರಲ್ಲಿ ೧೦೪ ಫಲಾನುಭವಿಗಳಿಗೆ ಮನೆ ಕಟ್ಟಿಕೊಡಲಾಗಿದೆ. ಇನ್ನು ಅಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರನ್ನು ಸರಕಾರದಿಂದ ಸಮೀಕ್ಷೆ ಮಾಡಿಸಿ ಉಳಿದವರಿಗೆ ೫ಎಕರೆ ೮ಗುಂಟೆಯಲ್ಲಿ ಮುಂಬರುವ ದಿನಮಾನಗಳಲ್ಲಿ ನಿವೇಶನ ಹಂಚಿಕೆ ಮಾಡುವ ಕಾರ್ಯ ಮಾಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಸಿಂದಗಿ ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆ ಅಡಿಯಲ್ಲಿ ಸಿಂದಗಿ ನಗರಸಭೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹಮ್ಮಿಕೊಂಡ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ೨೨೧ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಲಾಗಿತ್ತು. ೧೮೩ ಅರ್ಹ ಫಲಾನುಭವಿಗಳ ಪಟ್ಟಿ ಆಯ್ಕೆಯಾಗಿ ಬಂದಿದೆ. ಸು.೪೦ ತಾಂತ್ರಿಕ ದೋಷದಿಂದ ಹಕ್ಕು ಪತ್ರಗಳಾಗಿಲ್ಲ. ಹಾಗಾಗಿ ಇಂದು ೧೮೩ ಹಕ್ಕು ಪತ್ರಗಳು ವಿತರಣೆಯಾಗಿ ಬಡ ಕುಟುಂಬಗಳಿಗೆ ತಲುಪುತ್ತಿರುವುದು ಅತ್ಯಂತ ತೃಪ್ತಿ ತಂದಿದೆ. ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ ಮೇಲೆ ಸೂರು ಇಲ್ಲದವರಿಗೆ ಸೂರುವದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಸರ್ವೇ ನಂ.೨೪ರಲ್ಲಿ ೧೩ಎಕರೆ ಜಮೀನಿನಲ್ಲಿ ಸೂರು ನೀಡಲು ಅರ್ಹ ಪಲಾನುಭವಿಗಳ ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸಿಂದಗಿ ತಾಲೂಕಿನ ವಿವಿಧ ಭಾಗಗಳಿಂದ ವಲಸೆ ಬಂದು ಸುಮಾರು ೩೦ ವರ್ಷಗಳಿಂದ ನಗರದಲ್ಲಿಯೇ ಜನರು ವಾಸಿಸುತ್ತಿದ್ದಾರೆ. ಅಂತಹ ನಿವೇಶನ ಇಲ್ಲದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ಮಹದಾಸೆಯನ್ನು ಹೊಂದಿದ್ದೇನೆ. ಕಟ್ಟ ಕಡೆಯ ವ್ಯಕ್ತಿಗೂ ನಿವೇಶನ ಸಿಗಬೇಕು ಎನ್ನುವ ಗುರಿ ನಮ್ಮದು. ಸರ್ವೇ ನಂ೨೪ರ ೧೩ ಎಕರೆ ಜಮೀನಿನಲ್ಲಿ ೫೫೦ ನಿವೇಶನಗಳು ತಯ್ಯಾರಿಯಲ್ಲಿವೆ. ಇದಕ್ಕಾಗಿ ಪತ್ರಿಕೆಯ ಮೂಲಕ ಅರ್ಜಿ ಕರೆಯಲಾಗಿತ್ತು. ಅದರಲ್ಲಿ ೭೦೦ ಅರ್ಜಿಗಳು ಬಂದಿವೆ. ಆದಷ್ಟು ಬೇಗ ಆಶ್ರಯ ಸಮಿತಿ ಸಭೆ ಮಾಡಿ ೫೫೦ ಪಲಾನುಭವಿಗಳನ್ನು ಆಯ್ಕೆ ಮಾಡಿ ಇನ್ನು ಒಂದೆರೆಡು ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆ ೮೪೨/೨ರಲ್ಲಿ ವಾಸಿಸುತ್ತಿದ್ದ ೮೪ ಫಲಾನುಭವಿಗಳ ತೆರವು ಕಾರ್ಯಾಚರಣೆಯಲ್ಲಿ ಸರಕಾರ, ನಗರಸಭೆ ಮತ್ತು ತಾಲೂಕು ಆಡಳಿತ, ಜನಪ್ರತಿನಿದಿಗಳು ಪಾತ್ರ ಏನಿಲ್ಲ. ಅದು ಸುಪ್ರೀಂಕೋರ್ಟ್ನ್ ಆದೇಶದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ನೊಂದ ಕುಟುಂಬಗಳಿಗೆ ಸೂರು ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ನಂದ ಕುಟುಂಬಗಳು ಆಶ್ರಯ ಸಮಿತಿಗೆ ಅರ್ಜಿ ಸಲ್ಲಿಸಿ, ಸರ್ಕಾರದ ನಿವೇಶನ ಬೇಕು ಎಂದರೆ ಸರ್ಕಾರದ ನಿವೇಶನ, ನೀವೇ ಜಮೀನು ಖರೀದಿ ಮಾಡುತ್ತೇವೆ ಎಂದರೆ ಜಮೀನಿಗೆ ಬೇಕಾದಂತಹ ಸರಕಾರದ ಅನುದಾನವನ್ನು ಮಂಜೂರು ಮಾಡಿಸಿ ಕೊಡುವೆ. ೮೪ ಕುಟುಂಬಗಳು ನನಗೆ ವೈರಿಗಳಲ್ಲ. ಎಲ್ಲರೂ ನನ್ನ ಮತಕ್ಷೇತ್ರದ ನಿವಾಸಿಗಳು ಎಂದ ಅವರು, ಸರ್ವೇ ನಂ ೮೪೨/೨ ನಿವಾಸಿಗಳು ಇನ್ನು ವಾರ್ಡ್ ನಂ.೧೩ರ ಉದ್ಯಾನವನದ ಜಾಗೆಯಲ್ಲಿ ವಾಸಿಸುತ್ತಿದ್ದ ೭೧ ಕುಟುಂಬಗಳು ನಗರಸಭೆಗೆ ಬಂದು ಅರ್ಜಿ ಸಲ್ಲಿಸಿದರೆ ಮುಂಬರುವ ದಿನಮಾನಗಳಲ್ಲಿ ಸೂರು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಪೌರಾಯುಕ್ತ ರವಿ ಶಿರಗುಪ್ಪಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ, ಹಾಸಿಂಪೀರ ಆಳಂದ, ಅಬ್ದುಲ್ ರಹೀಮ್ ದುದನಿ, ಶರಣಪ್ಪ ಸುಲ್ಪಿ, ಸಾಯಬಣ್ಣ ಪುರದಾಳ, ಚನ್ನಪ್ಪ ಗೋಣಿ, ಮಲ್ಲು ಸದುಗೋಳ, ಭೀಮು ರೋಡಗಿ, ರಾಜು ಖೇಡ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಫಲಾನುಭವಿಗಳು ಇದ್ದರು.
” ಹಕ್ಕುಪತ್ರ ನೀಡಿದ ಮೇಲೆ ಮನೆಯಲ್ಲಿಯೇ ಇಟ್ಟುಕೊಳ್ಳದೇ ನಿಮಗೆ ನೀಡಿದ ನಿವೇಶನಕ್ಕೆ ಹೋಗಿ ಮನೆಯನ್ನು ಕಟ್ಟಿಕೊಳ್ಳಿ. ಅಲ್ಲಿ ನಿಮಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯವನ್ನು ನಗರಸಭೆ ಮತ್ತು ಸರಕಾರದ ವತಿಯಿಂದ ಒದಗಿಸಲಾಗುವುದು.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

