ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಜುಲೈನಿಂದ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಇದರಿಂದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಬಹುತೇಕ ಭರ್ತಿಯಾಗಿದೆ.
ಜಲಾಶಯ ಭರ್ತಿಯ ಹಂತ ತಲುಪಿದ್ದರೂ ಕೃಷ್ಣಾ ನದಿಗೆ ಸಾಂಪ್ರದಾಯಿಕವಾಗಿ ಸಲ್ಲಿಸುವ ಬಾಗಿನ ಅರ್ಪಣೆ ಮಾತ್ರ ಇನ್ನೂ ನಡೆದಿಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಆಲಮಟ್ಟಿಗೆ ಆಗಮಿಸಿ ಕೃಷ್ಣೆಗೆ ಬಾಗಿನ ಅರ್ಪಿಸಬೇಕು ಎಂಬ ಒತ್ತಾಯ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಬಲವಾಗಿ ಕೇಳಿಬರುತ್ತಿದೆ.
“ಕಾವೇರಿಗೆ ಸಿಗುವಷ್ಟೇ ಗೌರವ ಕೃಷ್ಣೆಗೂ ಸಿಗಲಿ”
ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನಾಡಿಯಾಗಿದ್ದು, ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ನೀಡುತ್ತಿದೆ. ಪ್ರತಿ ವರ್ಷ ಜಲಾಶಯ ಭರ್ತಿಯಾದಾಗ ಬಾಗಿನ ಅರ್ಪಿಸುವ ಪರಂಪರೆ ಇದೆ. ೨೦೦೨ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಈ ಪರಂಪರೆ ಆರಂಭಿಸಿದ್ದರು.
ಆದರೆ ಕಾವೇರಿ ಜಲಾಶಯಗಳಿಗೆ ನೀಡುವಷ್ಟರ ಮಟ್ಟಿನ ಮಹತ್ವವನ್ನು ಕೃಷ್ಣಾ ನದಿಗೆ ನೀಡಲಾಗುತ್ತಿಲ್ಲ ಎಂಬ ಅಸಮಾಧಾನ ಸ್ಥಳೀಯರಲ್ಲಿದೆ.
ರೈತ ಸಂಘಗಳ ಆಗ್ರಹ
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, “ಕೆಆರ್‌ಎಸ್ ಜಲಾಶಯ ಭರ್ತಿಯಾದಾಗ ಮುಖ್ಯಮಂತ್ರಿ ಯಾರೇ ಆಗಿದ್ದರೂ ಬಾಗಿನ ಅರ್ಪಿಸುವ ಸಂಪ್ರದಾಯವಿದೆ. ಅದೇ ರೀತಿಯಲ್ಲಿ ಆಲಮಟ್ಟಿಯಲ್ಲೂ ಕೃಷ್ಣೆಗೆ ಗೌರವ ಸಲ್ಲಿಸುವ ಪರಂಪರೆ ಮುಂದುವರಿಯಬೇಕು” ಎಂದು ಹೇಳಿದರು.
ಕೃಷ್ಣಾ ತೀರ ಮುಳುಗಡೆ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಸ್ಥೆಯ ವಿಜಯಪುರ ಜಿಲ್ಲಾ ಸಂಚಾಲಕ ಜಿ.ಸಿ. ಮುತಾಲದಿನ್ನಿ, “ಒಳಹರಿವು ನಿಧಾನವಾಗಿ ಕಡಿಮೆಯಾಗುತ್ತಿದೆ. ನೀರಿನ ಮಟ್ಟ ಕುಸಿದ ಬಳಿಕ ಬಾಗಿನ ಅರ್ಪಿಸಲು ಸಾಧ್ಯವಾಗುವುದಿಲ್ಲ. ಸರ್ಕಾರ ಶೀಘ್ರವೇ ದಿನಾಂಕ ನಿಗದಿಪಡಿಸಬೇಕು” ಎಂದು ಒತ್ತಾಯಿಸಿದರು.
ಯುಕೆಪಿ ಪ್ರಗತಿ ಪರಿಶೀಲನೆಗೆ ಬೇಡಿಕೆ
ಬಾಗಲಕೋಟೆ ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಅರವಿಂದ ಮುಚಖಂಡಿ, ಮುಖ್ಯಮಂತ್ರಿ ಅವರು ಆಲಮಟ್ಟಿಗೆ ಬಂದಾಗ ಕೆಬಿಜೆಎನ್‌ಎಲ್ ಹಾಗೂ ಯುಕೆಪಿ ಮೂರನೇ ಹಂತ, ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಳುಗಡೆ ಭಾಗದ ನಿರೀಕ್ಷೆ
ಈ ಹಿಂದೆ ನೀರಾವರಿ ಸಚಿವರಾಗಿದ್ದಾಗ ಆಲಮಟ್ಟಿಗೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್ ಅವರು ಇದೀಗ ಮುಖ್ಯಮಂತ್ರಿಯಾಗಿ ಬಂದು ಬಾಗಿನ ಅರ್ಪಿಸಬೇಕು ಎಂಬುದು ಉತ್ತರ ಕರ್ನಾಟಕದ ಜನರ ಆಶಯವಾಗಿದೆ.
ಕೃಷ್ಣಾ ನದಿ ಇಲ್ಲಿನ ಜನರ ಬದುಕು, ಕೃಷಿ ಮತ್ತು ಆರ್ಥಿಕತೆಯೊಂದಿಗೆ ಬೆಸೆದುಕೊಂಡಿರುವುದರಿAದ ಬಾಗಿನ ಅರ್ಪಣೆಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡದೆ, ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸುವ ಕಾರ್ಯಕ್ರಮವಾಗಿ ಆಯೋಜಿಸಬೇಕು ಎಂಬ ಒತ್ತಾಯ ಬಲಗೊಳ್ಳುತ್ತಿದೆ.
ಇವತ್ತಿನ ನೀರಿನ ಮಟ್ಟ: ೫೧೯.೬ ಮೀಟರ್ ಗರಿಷಠ ಮಟ್ಟ ಜಲಾಶಯದಲ್ಲಿ ೧೨೩.೦೮೧ ಟಿ.ಎಂ.ಸಿ. ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯದಲ್ಲಿ ಪ್ರಸಕ್ತ೫೧೯.೫೯ಮೀಟರ್ ನೀರಿನಮಟ್ಟವಿದ್ದು.೧೨೨.೮೩೪ ಟಿ.ಎಂ.ಸಿ ಅಡಿ ನೀರು ಸಂಗ್ರಹವಿದೆ. (೯೯.೮೦%)
ಆಲಮಟ್ಟಿ ಜಲಾಶಯಕ್ಕೆ ನೀರು ಹರಿಸುವ ಹಿಪ್ಪರಗಿ ಬ್ಯಾರೇಜ್ ಕೂಡ ಸುಮಾರು ೧೫ ದಿನಗಳ ಹಿಂದೆಯೇ ಭರ್ತಿಯಾಗಿದೆ ಎಂದು ತಿಳಿದುಬಂದಿದೆ.

