ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿ ನೂತನ ರಸ್ತೆಗಳನ್ನು ನಿರ್ಮಿಸುವುದರ ಜೊತೆಗೆ ವಿದ್ಯುತ್ ದೀಪಗಳಿಂದ ನಗರವನ್ನು ಅಲಂಕರಿಸುವ ಮಹದಾಸೆ ಹೊಂದಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ.೨ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಿಂದಗಿ ನಗರ ವೇಗವಾಗಿ ಬೆಳೆಯುತ್ತಿದ್ದು, ರಸ್ತೆ, ಬೀದಿ ದೀಪ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಲಾಗಿದೆ. ಈಗಾಗಲೇ ೩೪ ರಸ್ತೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ೮ ರಸ್ತೆಗಳ ಕಾಮಗಾರಿ ಆರಂಭಗೊಂಡಿದೆ. ಉಳಿದ ರಸ್ತೆಗಳಿಗೂ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು. ನಗರದಲ್ಲಿ ೨೭ ಕಿ.ಮೀ. ಉದ್ದದ ಸಿಸಿ ರಸ್ತೆ ನಿರ್ಮಾಣಕ್ಕೆ ರೂ.೨೦ ಕೋಟಿ ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಮಂಜೂರಾತಿ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಸಿಂದಗಿ ನಗರದ ಒಟ್ಟು ಆರು ಪ್ರಮುಖ ರಸ್ತೆಗಳಿಗೆ ನೂತನ ವಿದ್ಯುತ್ ಕಂಬಗಳ ಮಂಜೂರಾತಿ ದೊರೆತಿದೆ. ಸಂಗಮ್ ಬಾರ್‌ನಿಂದ ಹಳೆ ಚಾಂದಕವಟೆ ರಸ್ತೆವರೆಗೆ ೧೬, ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ವರೆಗೆ ೨೦, ವಿವೇಕಾನಂದ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ೨೮, ಸಿಂದಗಿ ಕೋಡಂಗಲ್ ರಸ್ತೆಯಿಂದ ಹೆಗ್ಗೆರೇಶ್ವರ ದೇವಸ್ಥಾನದವರೆಗೆ ೨೫, ಚಿಕ್ಕಸಿಂದಗಿ ಕ್ರಾಸ್‌ನಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ೧೭ ಹಾಗೂ ವಿವೇಕಾನಂದ ವೃತ್ತದಿಂದ ಬಂದಾಳ ರಸ್ತೆ ಶಾಂತವೀರ ನಗರದ ೨ನೇ ಅಡ್ಡ ರಸ್ತೆಯವರೆಗೆ ೪೦ ವಿದ್ಯುತ್ ಬೀದಿ ದೀಪದ ಕಂಬಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು. ಕಾಮಗಾರಿಗಳನ್ನು ಆದಷ್ಟು ಬೇಗ ಆರಂಭಿಸಿ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ನಗರಸಭೆಯಲ್ಲಿ ಸಿಬ್ಬಂದಿ ಕೊರತೆ
“ಸಿಂದಗಿ ನಗರದಲ್ಲಿ ೨೩ ವಾರ್ಡ್ಗಳಿದ್ದು, ಸುಮಾರು ೬೦ ಸಾವಿರ ಜನಸಂಖ್ಯೆ ಇದೆ. ಆದರೆ ನಗರಸಭೆಯಲ್ಲಿ ಕೇವಲ ೫೩ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದರಿಂದ ಆಡಳಿತ ವ್ಯವಸ್ಥೆಯಲ್ಲಿ ಸಮಸ್ಯೆಯಾಗುತ್ತಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಒಟ್ಟು ೧೨೧ ಹುದ್ದೆಗಳ ಅವಶ್ಯಕತೆ ಇದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹುದ್ದೆಗಳು ಮಂಜೂರಾದರೆ ಸಿಬ್ಬಂದಿ ಕೊರತೆಗೆ ಶಾಶ್ವತ ಪರಿಹಾರ ದೊರೆಯಲಿದೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

