ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಿಂದ ಬೆದರಿಕೆ ತಂತ್ರ | ಶಿಕ್ಷಕಿ ಜಯಶ್ರೀ ಬೆಣ್ಣಿ ಆರೋಪ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೨೦೨೬ ರಿಂದ ೩೧ರ ಅವಧಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಗೊಂದಲದ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಶಿಕ್ಷಕಿ ಜಯಶ್ರೀ ಬೆಣ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸಿ ಸಂಘವು ಈಗ ಪ್ರಕಟಪಡಿಸುತ್ತಿರುವ ಮತದಾರರ ಪಟ್ಟಿಯಲ್ಲಿ ಸೇವೆಗೆ ಸೇರಿದಾಗಿನಿಂದ ಈ ತನಕ ಸದಸ್ಯತ್ವ ಕಟಾವಣೆಯಾಗಿದ್ದ ಸದಸ್ಯರ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡು ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದ್ದು, ಒಂದು ವೇಳೆ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸದೇ ಚುನಾವಣೆ ಮಾಡಿದ್ದೇ ಆದಲ್ಲಿ ಇದು ಪ್ರಜಾಪ್ರಭುತ್ವದ ಒಂದು ವಿಕಾರ ರೂಪವನ್ನು ತಾಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ತಾಲೂಕು ಪ್ರಾಥಮಿಕ ಶಿಕ್ಷಕ ಸಂಘ ಸಿಂದಗಿ ಘಟಕದ ನಿರ್ದೇಶಕ ಸ್ಥಾನಗಳ ಚುನಾವಣೆ ಘೋಷಣೆಯಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿ ಮೈಬೂಬಪಾಷಾ ಮೂಲಿಮನಿ ಆದೇಶ ಹೊರಡಿಸಿದ್ದಾರೆ. ತಾಲೂಕು ಘಟಕದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಏ.೧೧ ಮತ್ತ ೧೨ ಕೊನೆಯ ದಿನಾಂಕವಾಗಿತ್ತು. ಆದರೆ ಇನ್ನುವರೆಗೂ ನಾಮಪತ್ರ ಸಲ್ಲಿಸಲು ಕಛೇರಿಗೆ ತೆರಳಿದರೆ ಕಛೇರಿ ಬೀಗ ಹಾಕಿದ್ದು, ಚುನಾವಣಾಧಿಕಾರಿ ಯಾರೆಂಬು ಮಾಹಿತಿ ಇಲ್ಲ. ಇದರ ಕುರಿತಾಗಿ ಸಂಬಂಧಿಸಿದ ಜಿಲ್ಲಾ ಮತ್ತು ತಾಲೂಕು ಘಟಕಕ್ಕೆ ದೂರವಾಣಿ ಮೂಲಕ ಕರೆ ಮಾಡಿದರೆ ಅವರಿಂದ ಯಾವದೇ ಉತ್ತರ ಮಾತ್ರ ಸಿಕ್ಕಿಲ್ಲ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೇ ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳು ಶ್ಯಾಮಿಲಾಗಿ ಚುನಾವಣೆಯಲ್ಲಿ ಶಿಕ್ಷಕರು ಭಾಗಿಯಾಗದಂತೆ ನಡೆದುಕೊಳ್ಳುತ್ತಿದ್ದಾರೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.೧೨ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಇದುವರೆಗೆ ಚುನಾವಣಾ ವೇಳಾಪಟ್ಟಿ, ಚುನಾವಣಾ ನಡೆಯುವ ಸ್ಥಳ ಹಾಗೂ ಸಂಬಂಧಿತ ಕಚೇರಿಗಳ ಕುರಿತು ಯಾವುದೇ ಅಧಿಕೃತ ಪ್ರಕಟಣೆ ನೀಡಲಾಗಿಲ್ಲ. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಸಂಬಂಧಿಸಿದಂತೆ ಪ್ರಶ್ನೆಗಳು ಉದ್ಭವವಾಗಿವೆ. ಹಲವಾರು ಶಿಕ್ಷಕರು ಈ ಕ್ರಮವನ್ನು ಪ್ರಶ್ನಿಸಿ, ಸಮರ್ಪಕ ಮಾಹಿತಿ ನೀಡದೇ ನಾಮಪತ್ರ ಸ್ವೀಕಾರ ಪ್ರಾರಂಭಿಸಿರುವುದು ಸರಿಯಲ್ಲ ಎಂಬುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಶಿಕ್ಷಕರ ಸಂಘದ ಚುನಾವಣೆಯು ಪ್ರಜಾಸತ್ತಾತ್ಮಕ ವಿಧಾನದಲ್ಲಿ, ಸ್ಪಷ್ಟ ಮಾರ್ಗಸೂಚಿಗಳೊಂದಿಗೆ ನಡೆಯಬೇಕು ಎಂಬುದು ಶಿಕ್ಷಕರ ಒತ್ತಾಯ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದರು.
ಈ ವೇಳೆ ಶಿಕ್ಷಕ ಸಿ.ಬಿ.ಗಡಗಿ, ಶೋಭಾ ಚಿಗರಿ, ಬಸಯ್ಯ ಹಿರೇಮಠ ಮಾತನಾಡಿ, ಸಂಘದಲ್ಲಿ ಹಲವಾರು ಹುದ್ದೆಗಳನ್ನು ಸ್ವೀಕರಿಸಿ ಪ್ರಾಮಾಣಿಕವಾಗಿ ನಿರ್ವಹಣೆ ಮಾಡಿದ್ದೇವೆ. ಆದರೆ ಇಂತಹ ಪ್ರಸ್ತುತ ಸಂಘದ ಸದಸ್ಯರು ಲಜ್ಜೆಗೆಟ್ಟಿದ್ದಾರೆ. ಕಾನೂನು ಬಾಹಿರ ಚುನಾವಣೆ ನಡೆಸಲು ಮುಂದಾಗಿದ್ದು ಖೇದಕರ ಸಂಗತಿ. ಇನ್ನಾದರೂ ಇದನ್ನು ಕೈಬಿಟ್ಟು ಪ್ರಾಮಾಣಿಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕು. ನಮಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಯಪ್ಪ ಇವಣಿಗಿ, ಆಯ್.ಎಂ.ಎಲಿಗಾರ, ಎಸ್.ಎಮ್.ಕೂಡಗಿ, ಬಿ.ಎಸ್.ಹಿರೇಮಠ, ಎಂ.ಎಸ್.ಕಟಕದೊAಡ, ಎಸ್.ಎಂ.ಮಸಳಿ, ಸುನಂದಾ ನಾರಾಯಣಕರ, ಶ್ರೀಶೈಲ ರೋಡಗಿ, ಗಂಗಾಧರ ತಾವರಖೇಡ, ಕಾಶೀನಾಥ ಪಾಟೀಲ, ನಾಗೇಶ ನಾಗೂರ, ಜಿ.ಎನ್.ನಡಕೂರ, ರೇವಣಸಿದ್ದ ಹೂಗಾರ ಸೇರಿದಂತೆ ಅನೇಕರು ಇದ್ದರು.
” ಸಿಎಂ ಸಿದ್ದರಾಮಯ್ಯ ಅವರು ನಮ್ಮ ಸಂಬಂಧಿಕರು, ಆಪ್ತರು ಮತ್ತು ನಮ್ಮ ಸಮಾಜದವರು ನಮ್ಮ ಮಾತು ಅವರು ಕೇಳುತ್ತಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ಅವರು ನಮ್ಮನ್ನು ಹೆದರಿಸುವ ಜೊತೆಗೆ ನಿಮ್ಮನ್ನು ಎಲ್ಲಿ ಇಡಬೇಕು ಅಲ್ಲಿ ಇಡಲಾಗುವುದು ಎಂದು ಧಮಕಿ ಹಾಕುತ್ತಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಇದನ್ನು ಗಮನಿಸಿ ತನಿಖೆ ಮಾಡಬೇಕು ಎಂಬುದು ಆಗ್ರಹ.”
– ಜಯಶ್ರೀ ಬೆಣ್ಣಿ
ಶಿಕ್ಷಕಿ
” ಮತದಾರ ಪಟ್ಟಿಯನ್ನು ತಾಲೂಕು ಕಾರ್ಯದರ್ಶಿಗಳ ಮೂಲಕ ಈಗಾಗಲೇ ಕಳುಹಿಸಲಾಗಿದೆ. ಅದರ ಮಾಹಿತಿ ಇನ್ನು ರಾಜ್ಯ ಘಟಕದಿಂದ ನಮಗೆ ಬಂದಿಲ್ಲ. ಬಂದರೆ ಅದಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ. ನನ್ನ ಅವಧಿಯಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಹಾಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ೨೦೨೬-೩೧ರ ಚುನಾವಣೆಗೆ ನಾನು ನಿಲ್ಲಲ್ಲ ಎಂದು ಈಗಾಗಲೇ ನಿರ್ಧರಿಸಿದ್ದೇನೆ. ನಮ್ಮ ಸಂಘದ ಕಾರ್ಯದರ್ಶಿಗಳು ಹೆದರಿ ಭಯದಿಂದ ಕರೆ ಸ್ವೀಕಾರ ಮಾಡುತ್ತಿಲ್ಲದಿರಬಹುದು. ಇದಕ್ಕೆ ಸಂಬಂಧಿತ ವಿಷಯ ರಾಜ್ಯ ಚುನಾವಣಾಧಿಕಾರಿಗಳ ಗಮನಕ್ಕೆ ಪತ್ರ ರವಾನೆ ಮಾಡುತ್ತೇನೆ.”
– ಆನಂದ ಭೂಸನೂರ
ಶಿಕ್ಷಕರ ಸಂಘದ ತಾಲೂಕಾಧ್ಯಕ್ಷರು

