SSLC ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಪಟ್ಟಣದಲ್ಲಿರುವ ಶ್ರೀ ವಿಶ್ವಭಾರತಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯು, ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿರುವ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದೆ. 2026-27ನೇ ಸಾಲಿನ ಪಿಯು ಪ್ರವೇಶ ಪಡೆಯಲು ಇದೇ ಎಪ್ರಿಲ್ 6 ರಂದು ಪ್ರವೇಶಾತಿ ಪರೀಕ್ಷೆ ನಡೆಸಲಿದ್ದು, ಅದರಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಶ್ರೀ ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಭರತ್ ಚಾಮರಾಜಣ್ಣ ಹೇಳಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭರತ್ ಚಾಮರಾಜಣ್ಣ ಅವರು, ಸೋಮವಾರ ಬೆಳಗ್ಗೆ 9:30ಕ್ಕೆ ಪ್ರವೇಶಾತಿ ಪರೀಕ್ಷೆ ಆರಂಭವಾಗಲಿದೆ. ಒಟ್ಟು 50 ಅಂಕಗಳಿಗೆ ಪರೀಕ್ಷೆ ಇರಲಿದ್ದು, ಎಸ್ ಎಸ್ ಎಲ್ ಸಿ ಯಲ್ಲಿರುವ ವಿಜ್ಞಾನ ಹಾಗೂ ಗಣಿತ ಸಂಬಂಧಿತ ಪ್ರಶ್ನೆಗಳು ಇರಲಿದೆ. ಕಳೆದ ಮೂರು ವರ್ಷಗಳಿಂದಲೂ ಪ್ರವೇಶಾತಿ ಪರೀಕ್ಷೆ ನಡೆಸಿಕೊಂಡು ಬರುತ್ತಿದ್ದು, ಅವಳಿ ತಾಲೂಕಿನ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಪ್ರವೇಶಾತಿ ಪರೀಕ್ಷೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾದರೆ, ಉಳಿದ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ಹೇಳಿದರು.
ಭೌತಶಾಸ್ತ್ರ ಉಪನ್ಯಾಸಕ ಪ್ರದೀಪ್ ಕುಮಾರ್ ಹೆಚ್ ಜಿ ಮಾತನಾಡಿ, ಶ್ರೀ ವಿಶ್ವಭಾರತಿ ಪದವಿ ಪೂರ್ವ ಕಾಲೇಜು ಪ್ರಾರಂಭವಾದಗಿನಿಂದಲೂ ಅಂದರೆ 2023ರಿಂದಲೂ ಪ್ರತಿವರ್ಷ ಪ್ರಥಮ ಪಿಯುಸಿ ಪ್ರವೇಶಕ್ಕೂ ಮುನ್ನ ಪ್ರವೇಶಾತಿ ಪರೀಕ್ಷೆ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷವೂ ಕೂಡ ಪ್ರವೇಶಾತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡುತ್ತಾ ಬರುತ್ತಿದ್ದೇವೆ. 2025-2026 ಸಾಲಿನಲ್ಲಿ 236 ಮಕ್ಕಳು ದಾಖಲಾಗಿದ್ದರು. ಅದರಲ್ಲಿ 160ಕ್ಕೂ ಹೆಚ್ಚು ಹೆಣ್ಣು ಮಕ್ಕಳೇ ಇದ್ದಾರೆ. ಕಾಲೇಜಿನಲ್ಲಿ ಮೂಲಭೂತ ಸೌಕರ್ಯವಿದ್ದು, ಪಾಠದ ಜೊತೆಗೆ ಕ್ರೀಡೆಗೂ ಕೂಡ ಹೆಚ್ಚಿನ ಆದ್ಯತೆ ನೀಡಲಾಗುತ್ತೆ. ಜೊತೆಗೆ ವಿಶೇಷ ತರಗತಿ ಹಾಗು , ಸಿಇಟಿ- ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತೆ ಎಂದು ಹೇಳಿದರು.

