ಉದಯರಶ್ಮಿ ದಿನಪತ್ರಿಕೆ
ಚಡಚಣ: ಸ್ಥಳೀಯ ಶ್ರೀ ಸಮಗಾರ ಹರಳಯ್ಯ ಸಮಾಜದ ಕಾರ್ಯಾಲಯದಲ್ಲಿ ಹರಳಯ್ಯ ಸಮಾಜದ ವತಿಯಿಂದ ಸಮಾಜಕ್ಕೆ ಮಾದರಿಯಾದ ಇಬ್ಬರು ಯುವಕರಿಗೆ ಸನ್ಮಾನ ಸಮಾರಂಭ ಮಾಡಲಾಯಿತು.
ಈ ಸಂದರ್ಭದಲ್ಲಿ ಉಚಿತವಾಗಿ ಶ್ರೀಶೈಲ ಯಾತ್ರೆಯನ್ನು ಆಯೋಜಿಸಿದ ಸಮಾಜದ ಯುವ ಮುಖಂಡರಾದ ಶ್ರೀ ಹಣಮಂತ ರಾವುತಪ್ಪ. ಹೊನ್ನಾಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಳೆದ ಮೂರು ವರ್ಷಗಳಿಂದ ಶ್ರೀಶೈಲ, ಮಂತ್ರಾಲಯ, ಮಹಾನಂದಿ, ದೇವರ ಹಿಪ್ಪರಗಿಯ ರಾವುತರಾಯ ಸೇರಿದಂತೆ ಹಲವು ಪವಿತ್ರ ಕ್ಷೇತ್ರಗಳಿಗೆ ಸರ್ವ ಸಮಾಜದ 62 ಜನರಿಗೆ ಉಚಿತ ದರ್ಶನ ಮಾಡಿಸಿರುವ ಸೇವೆಯನ್ನು ಶ್ಲಾಘಿಸಲಾಯಿತು.
ಇದೇ ವೇಳೆ ಬಡತನ ಮೆಟ್ಟಿ ನಿಂತು ಎಲ್.ಎಲ್.ಬಿ ಪದವಿ ಓದುತ್ತಿರುವ ಸಮಾಜದ ಯುವಕ ಗೋವಿಂದ ಚಂದ್ರಾಮ. ಹರಳೆ ಅವರು ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಅಮೋಘಸಿದ್ಧ ಮ. ಬಗಲಿ ಅವರು, “ಸಮಾಜದಲ್ಲಿ ಕಾನೂನು ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆ ಇರುವುದರಿಂದ ಗೋವಿಂದ ಹರಳೆ ಅವರು ಯುವಕರಿಗೆ ಮಾದರಿಯಾಗಬೇಕು. ಹೆಚ್ಚಿನವರು ಕಾನೂನು ವಿದ್ಯಾಭ್ಯಾಸದ ಕಡೆಗೆ ಮುಂದಾಗಬೇಕು” ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಪರಶುರಾಮ ದುಂ. ವಾಘಮೋರೆ ಅವರು ಮಾತನಾಡಿ, “ಹಣಮಂತ ಹೊನ್ನಾಕಟ್ಟಿ ಅವರು ಸತತವಾಗಿ ಮೂರನೇ ಬಾರಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ಉಚಿತ ದರ್ಶನ ವ್ಯವಸ್ಥೆ ಮಾಡಿಸಿರುವುದು ಶ್ಲಾಘನೀಯ” ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಭೀಮಾಶಂಕರ ವಾಘಮೋರೆ, ಸದಾಶಿವ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಹಣಮಂತ ವಾಘಮೋರೆ, ಮಧುಸೂದನ್ ವಾಘಮೋರೆ ಉಪಸ್ಥಿತರಿದ್ದರು.

