ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೇ ನಿರ್ಮಾಣ ಮಾಡಿದ ವಾಣಿಜ್ಯ ಮಳಿಗೆ, ಮನೆ ನಿರ್ಮಾಣ ಮಾಡುತ್ತಿರುವ ಕೆಲ ವ್ಯಾಪಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಕರವೇ ಕಾರ್ಯಕರ್ತರು ತಹಸೀಲ್ದಾರ ಮೂಲಕ ಬುಧವಾರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ಪಟ್ಟಣದ ರಾಜ್ಯ ಬಿಜ್ಜಳ ರಾಜ್ಯ ಹೆದ್ದಾರಿಯಲ್ಲಿರುವ ಬಸ್ ನಿಲ್ದಾಣ ಸಮೀಪ ಲೋಕನಾಥ ನೇಮಿಚಂದ ಅಗರವಾಲ ಅವರು ನಿಯಮ ಬಾಹಿರವಾಗಿ ಐದು ಅಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಪುರಸಭೆಯಿಂದ ಯಾವುದೇ ಅನುಮತಿ (ಪರವಾನಿಗೆ) ಪಡೆಯದೇ ವಾಣಿಜ್ಯ ಮಳಿಗೆ ಮುಂದೆ ಅವೈಜ್ಞಾನಿಕವಾಗಿ ವಿದ್ಯುತ್ ಪರಿವರ್ತಕ ಅಳವಡಿಸಿದ್ದಾರೆ. ಇದು ಸಾರ್ವಜನಿಕರಿಗೆ ಅಪಾಯವಾಗುವ ಸಂಭವವಿದೆ. ಇವರದೇ ಸಿಟಿಎಸ್ ನಂ. 342 ರಲ್ಲಿ ಸಂಪೂರ್ಣ ಸರ್ಕಾರಿ ಉದ್ಯಾನವನ ಜಾಗೆಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನೊಬ್ಬರು ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಜಾಗೆಯನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡು ಅಲ್ಲಿದ್ದ ಬಾವಿಯನ್ನು ತೆರವು ಗೊಳಿಸಿ ಕಟ್ಟಡ ನಿರ್ಮಾಣ ಮಾಡಲು ಹೊರಟಿದ್ದಾರೆ. ವಿಜಯಪುರ ರಸ್ತೆಯಲ್ಲಿರುವ ಸಿಟಿಎಸ್ ನಂ.344 ರಲ್ಲಿಯೂ ಪುರಸಭೆಯಿಂದ ಅನುಮತಿ ಪಡೆಯದೇ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿ.ಟಿ.ಎಸ್.ನಂ-2005, 2006, 2007, 2008 ಹಾಗೂ 2009 ಅನಧಿಕೃತವಾಗಿ ಪುರಸಭೆಯ ಅನುಮತಿ ಇಲ್ಲದೇ ಕಟ್ಟಡ ಮಾಡಿರುತ್ತಾರೆ. ಸರ್ವೆ ನಂ-361 ಮೋಹನ ಗಣಪತಿಲಾಲ ಅಗರವಾಲ ಇವರು ಎನ್.ಎ. ಪ್ಲಾಟ ಮಾಡಿಕೊಂಡಿದ್ದು. ಮಹಾಂತೇಶ್ವರಿ ನಗರದಲ್ಲಿ ಯಾವುದೇ ಅಭಿವೃದ್ದಿ ಪಡಿಸದೇ ಪುರಸಭೆಗೆ ಹಸ್ತಾಂತರಿಸದೇ ವಂಚನೆ ಮಾಡಿದ್ದಾರೆ. ಈ ಕೂಡಲೇ ಸರಕಾರಕ್ಕೆ ವಂಚನೆ ಮಾಡಿದವರ ಮೇಲೆ ಜಿಲ್ಲಾಧಿಕಾರಿಗಳು ವಂಚನೆ ಪ್ರಕರಣ ದಾಖಲಿಸಿ ಎಷ್ಟು ವರ್ಷದಿಂದ ತೆರಿಗೆ ಕಟ್ಟಿಲ್ಲವೋ ಅದರ ದುಪ್ಪಟ್ಟು ಹಣವನ್ನು ಅವರಿಂದ ಭರಣ ಮಾಡಿಸುವಂತಹ ಕೆಲಸವನ್ನು ಮಾಡಬೇಕೆಂದು ಆಗ್ರಹಿಸಿದ ಅವರು, ಯಾವುದೇ ಕಾನೂನು ಕ್ರಮ ಜರುಗಿಸದೇ ಹೋದರೆ ಕರವೇ ಹೋರಾಟಕ್ಕೆ ಮುಂದಾಗುತ್ತದೆ ಎಂದರು.
ಮನವಿ ಪತ್ರವನ್ನು ಪ್ರಭಾರಿ ತಹಸೀಲ್ದಾರ ಎ.ಡಿ.ಅಮರವಾಡಗಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದಯಾನಂದ ಸಾರವಾಡ, ಸೀತಾರಾಮ ಭಜಂತ್ರಿ, ಹಣಮಂತ ಟಕ್ಕಳಕಿ,ರವಿ ವಡ್ಡರ,ಸುರೇಶ ಬೇವಿನಗಿಡದ, ರಾಜು ವಡ್ಡರ,ಗಣೇಶ ಗಾಯಕವಾಡ,ರಾಜು ದಡ್ಡಿ ಇತರರು ಇದ್ದರು.

