ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನೀರಿಲ್ಲದೆ ಜೀವವಿಲ್ಲ. ನಾಗರಿಕತೆಗಳು ನೀರು ಇದ್ದಲ್ಲಿಯೇ ಬೆಳೆದು ಬಂದಿದ್ದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ನೀರಿನ ಮಹತ್ವ ಅರಿತು ಮಿತವಾಗಿ ಬಳಕೆ ಮಾಡಬೇಕೆಂದು ಪ್ರಧಾನ ಸಿವ್ಹಿಲ್ ನ್ಯಾಯಾಧೀಶ ಅಮೀತ ಘಟ್ಟಿ ಹೇಳಿದರು.
ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾಡಳಿತ ಹಾಗೂ ತಾಲೂಕ ಪಂಚಾಯತಿ ಕಾರ್ಯಾಲಯ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆಯಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಕಲ ಜೀವರಾಶಿಗಳಿಗೂ ನೀರು ಬೇಕು. ನಮ್ಮ ಉಳಿವಿಗೆ ಆಹಾರ, ಗಾಳಿ ಎಷ್ಟು ಮುಖ್ಯವೋ ಅಷ್ಟೇ ನೀರು ಸಹ ಮುಖ್ಯವಾಗಿದೆ. ನೀರು ಪೋಲು, ಹವಾಮಾನ ಬದಲಾವಣೆ ಸೇರಿದಂತೆ ವಿವಿದ ಕಾರಣಗಳಿಂದ ನೀರಿನ ಕೊರತೆ ಹೆಚ್ಚಾಗುತ್ತಿದೆ. ಇದು ಕೈಗಾರಿಕೆ, ಕೃಷಿ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಸಿಹಿನೀರಿನ ಮೂಲಗಳನ್ನು ಕಾಪಾಡುವ ಮೂಲಕ ಮುಂದಿನ ಜನಾಂಗಕ್ಕೆ ನೀರನ್ನು ಉಳಿಸಬೇಕಿದೆ. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ನ್ಯಾಯವಾದಿ ಬಿ.ಪಿ.ಪತ್ತಾರ ಅವರು ಉಪನ್ಯಾಸ ನೀಡಿ ಮಾತನಾಡಿದ ಅವರು, ನೀರನ್ನು ಮಿತವಾಗಿ ಬಳಸಬೇಕು. ಬೇಸಿಗೆಯ ದಿನದಲ್ಲಿ ತಣ್ಣನೆ ನೀರನ್ನು ಹಾಗೂ ಹೆಚ್ಚು ನೀರನ್ನು ಸೇವಿಸಬೇಕು. ಶುದ್ಧ ಕುಡಿಯುವ ನೀರನ್ನು ಬಳಸಬೇಕು.ತಗ್ಗು ದಿನ್ನೆಗಳಲ್ಲಿ ನೀರನ್ನು ಸಂಗ್ರಹಣೆ ಮಾಡುವುದು ಕಡಿಮೆ ಮಾಡಿ ಅವುಗಳಿಂದ ಉಂಟಾಗುವ ಮಾರಣಾಂತಿಕ ಕಾಯಿಲೆಗಳಿಂದ ಸುರಕ್ಷಿತರಾಗಬೇಕು. ನೀರಿನ ಮಹತ್ವ ಕುರಿತು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವ್ಹಿ.ಬಿ.ಗೊಂಗಡಿ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಒಂದನೇ ಸಿವ್ಹಿಲ್ ನ್ಯಾಯಾಧೀಶ ಈರಪ್ಪ ಢವಳೇಶ್ವರ, ಸಹಾಯಕ ಸರ್ಕಾರಿ ಅಭಿಯೋಜಕಿ ರಾಜರಾಜೇಶ್ವರಿ ಸುತ್ತಾರ, ಉಪತಹಸೀಲ್ದಾರ ಸೋಮಶೇಖರ ತಾವರಖೇಡ, ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಕೂಡಗಿ ಪೊಲೀಸ್ ಠಾಣೆಯ ಪಿಎಸೈ ವ್ಹಿ.ಎಚ್.ಹತ್ತಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುಳಾ ಹಿರೇಮನಿ, ಹಿರಿಯ ನ್ಯಾಯವಾದಿ ವ್ಹಿ.ಬಿ.ಮರ್ತರ, ಗ್ರಾಮ ಪಂಚಾಯಿತಿ ಪಿಡಿಓ ಡಿ.ಎಂ.ಬಿಳೆಕುದರಿ ಇತರರು ಇದ್ದರು.ತಾಲೂಕು ಪಂಚಾಯಿತಿಯ ತಾಲೂಕು ಯೋಜನಾಧಿಕಾರಿ ಎಂ.ಬಿ.ಸೊನ್ನದ ಸ್ವಾಗತಿಸಿ, ನಿರೂಪಿಸಿದರು.

